ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋವಿಡ್ ಜನಕ ಚೀನಾದಲ್ಲಿ ದಿನೇ ದಿನೇ ಕೋವಿಡ್ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚೀನಾವು ದೇಶದ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸುತ್ತಿದೆ. ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸುತ್ತಿದ್ದು ಐಸಿಯುಗಳನ್ನು ವಿಸ್ತರಿಸುವುದು, ಹೆಚ್ಚಿನ ಆರೋಗ್ಯ ಸಿಬ್ಬಂದಿಗಳ ನಿಯೋಜನೆ ಮುಂತಾದ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಕೋವಿಡ್ ಅನ್ನು ಪರಿಣಾಮಕಾರಿಯಾಗಿ ಹತ್ತಿಕ್ಕುವ ದೃಷ್ಟಿಯಿಂದ ಚೀನಾವು ಶೂನ್ಯ ಕೋವಿಡ್ ನೀತಿಯನ್ನು ಅನುಸರಿಸುತ್ತಿತ್ತು. ಕಟ್ಟುನಿಟ್ಟಿನ ಲಾಕ್ ಡೌನ್ ಅನ್ನು ಜಾರಿಗೊಳಿಸಿತ್ತು. ಇದರಿಂದ ರೋಸಿ ಹೋದ ಚೀನಾದ ಜನತೆ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಶೂನ್ಯ ಕೋವಿಡ್ ನೀತಿಯಿಂದ ಅದೆಷ್ಟೋ ಕಾರ್ಖಾನೆಗಳನ್ನು ಮುಚ್ಚುವಂತಾಗಿ ಚೀನಾ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿತ್ತು. ಇದೀಗ ಮತ್ತೊಮ್ಮೆ ಚೀನಾದಲ್ಲಿ ಕೋವಿಡ್ ಉಲ್ಬಣಗೊಂಡಿದ್ದು ಈ ಬಾರಿ ಚೀನಾ ತನ್ನ ಶೂನ್ಯ ಕೋವಿಡ್ ನೀತಿಯನ್ನು ತುಸು ಸಡಿಲಿಸಲು ಯೋಜಿಸಿದೆ.
ಹಾಗಾಗಿ ಕೋವಿಡ್ ಉಲ್ಬಣವನ್ನು ತಡೆಗಟ್ಟಲು ಹೆಚ್ಚಿನ ಆಸ್ಪತ್ರೆಗಳು, ಐಸಿಯುಗಳನ್ನು ಅದು ನಿಯೋಜಿಸುತ್ತಿದೆ. ಅಧ್ಯಕ್ಷ ಜಿನ್ ಪಿಂಗ್ ಮಹತ್ವದ ಸಭೆ ನಡೆಸಿದ್ದು ಹೆಚ್ಚಿನ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸುವಂತೆ ಹಾಗೂ ಆಸ್ಪತ್ರೆಗಳನ್ನು ಸಜ್ಜುಗೊಳಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಔಷಧೀಯ ಸಾಮಗ್ರಿಗಳ ಹೆಚ್ಚಿನ ಪೂರೈಕೆಗೆ ಕ್ರಮ ವಹಿಸಬೇಕೆಂದು ಕ್ಯಾಬಿನೆಟ್ ಸಭೆಯಲ್ಲಿ ಚಿಂತಿಸಲಾಗಿದೆ ಎಂದು ಚೀನಾದ ರಾಜ್ಯ ಮಾಧ್ಯಮ ವರದಿ ಮಾಡಿದೆ ಎನ್ನಲಾಗಿದೆ.
ಅಧಿಕೃತವಾಗಿ ಎಷ್ಟು ಪ್ರಕರಣಗಳು ಪತ್ತಿಯಾಗಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಆದರೆ ಚೀನಾದ ಪ್ರಮುಖ ನಗರಗಳಲ್ಲಿ ಶಾಲೆಗಳು, ಹೊಟೆಲ್ ಗಳು, ಉದ್ದಿಮೆಗಳು ಮುಚ್ಚಲ್ಪಟ್ಟಿವೆ. ಕೋವಿಡ್ ಕೇಸ್ ಗಳಲ್ಲಿ ಗಣನೀಯ ಉಲ್ಬಣವಾಗುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.