ಮಕ್ಕಳ ಸ್ಮಾರ್ಟ್ ಫೋನ್ ಬಳಕೆಗೆ ಕಠಿಣ ನಿರ್ಬಂಧ ವಿಧಿಸಲು ಮುಂದಾದ ಚೀನಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಕ್ಕಳು ಮೊಬೈಲ್ ಫೋನ್ ದಾಸರಾಗುವುದರಿಂದ ನಿದ್ರಾಹೀನತೆ, ಶೈಕ್ಷಣಿಕ ಹಿಂದುಳಿಯುವಿಕೆ, ಸಾಮಾಜಿಕವಾಗಿ ಪ್ರತ್ಯೇಕವಾಗಿ ಉಳಿಯುವಿಕೆಯಂತಹ ಸಮಸ್ಯೆಗಳು ಹೆಚ್ಚುತ್ತಿರುವ ಬಗ್ಗೆ ಜಗತ್ತಿನಾದ್ಯಂತ ಕಳವಳ ವ್ಯಕ್ತವಾಗುತ್ತಿರುವ ನಡುವೆಯೇ, ಚೀನಾ ದೇಶದಲ್ಲಿನ ಮಕ್ಕಳು ಸ್ಮಾರ್ಟ್ ಫೋನ್ ಬಳಸುವುದರ ಮೇಲೆ ಕಠಿಣ ನಿರ್ಬಂಧ ವಿಧಿಸಲು ಮುಂದಾಗಿದೆ.

ಇದರಂತೆ, 18 ವರ್ಷಕ್ಕಿಂತ ಕೆಳಗಿನವರು ದಿನಕ್ಕೆ 2 ಗಂಟೆ ಮಾತ್ರವೇ ಮೊಬೈಲ್ ವೀಕ್ಷಿಸುವುದಕ್ಕೆ ಮಿತಿ ಹಾಕಲು ಉದ್ದೇಶಿಸಿದೆ. ಹಾಗೆಯೇ ವಿವಿಧ ವಯೋಮಾನದ ಮಕ್ಕಳಿಗೆ ವಿವಿಧ ರೀತಿಯ ಸಮಯ ನಿರ್ಬಂಧ ವಿಧಿಸಲಿದೆ.

8 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಕೇವಲ 40 ನಿಮಿಷ ಮಾತ್ರವೇ ಮೊಬೈಲ್ ವೀಕ್ಷಣೆಗೆ ಅವಕಾಶ ನೀಡಲು ನಿಯಮ ರೂಪಿಸಲಿದೆ.8 ರಿಂದ 16 ವರ್ಷ ಪ್ರಾಯದವರು ಒಂದು ಗಂಟೆಯಿಂದ ಹೆಚ್ಚು ಕಾಲ ಸ್ಮಾರ್ಟ್ ಫೋನ್ ಬಳಸುವಂತಿಲ್ಲ.18 ವರ್ಷಕ್ಕಿಂತ ಕೆಳಗಿವರಿಗೆ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಸ್ಮಾರ್ಟ್‌ಫೋನ್‌ಗಳು ಯಾವುದೇ ಸೇವೆಗಳನ್ನು ನೀಡುವುದಿಲ್ಲ.

ಅತಿಯಾದ ಮೊಬೈಲ್ ವೀಕ್ಷಣೆಯಿಂದ ಬೊಜ್ಜು, ನಿದ್ರಾ ಸಮಸ್ಯೆ,ಚಂಚಲತೆ ಮತ್ತು ಅತಿ ಚಟುವಟಿಕೆ ಸಮಸ್ಯೆ(ಎಎಚ್‌ಎಡಿ)ಯಂತಹ ಅನೇಕ ಕಾಯಿಲೆಗಳಿಗೆ ಕಾರಣವಾಗುವ ಜೊತೆಗೆ ಶೈಕ್ಷಣಿಕ ಕಲಿಕೆಯಲ್ಲಿ ಏಕಾಗ್ರತೆಗೂ ತೊಡಕಾಗುತ್ತಿದೆ.ಅಲ್ಲದೆ ಸಣ್ಣಮಕ್ಕಳಿಗೂ ಮೊಬೈಲ್ , ಅಂತರ್ಜಾಲ ಸೇವೆ ಲಭಿಸುವಂತೆ ಮಾಡುವ ಹೆತ್ತವರು , ಮಕ್ಕಳು ಇದರಿಂದ ದಾರಿ ತಪ್ಪುವ ಅಪಾಯವನ್ನು ಗ್ರಹಿಸಲು ವಿಫಲರಾಗುತ್ತಿರುವುದನ್ನು ಕೂಡ ತಜ್ಞರು ಬೊಟ್ಟು ಮಾಡುತ್ತಾರೆ.

ಇದನ್ನು ಮನಗಂಡಿರುವ ಚೀನಾದ ಆಡಳಿತವು ಮಕ್ಕಳಿಗೆ ಯಾವ ವಯಸ್ಸಿನವರಿಗೆ ಯಾವ ವಿಷಯಗಳು ಲಭಿಸಬೇಕು ಎಂಬ ನೆಲೆಯಲ್ಲೂ ಯೋಚಿಸಿ ಕ್ರಮ ರೂಪಿಸಲು ಮುಂದಾಗಿದೆ.ಮೂರು ವರ್ಷದ ಒಳಗಿನವರಿಗೆ ಹಾಡು ಮತ್ತು ಆಡಿಯೋ ಅಂಶಗಳು ಮಾತ್ರ ಲಭಿಸುವಂತೆ, 12-16ರ ನಡುವಣ ವಯಸ್ಸಿನವರಿಗೆ ಕೇವಲ ಶಿಕ್ಷಣ ಮತ್ತು ಸುದ್ದಿ ಆಧಾರಿತ ಅಂಶಗಳು ಮಾತ್ರ ಲಭಿಸುವಂತೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ.

ಟೆಕ್ ಕಂಪೆನಿಗಳು ಚಟ ಅಥವಾ ವ್ಯಸನಕ್ಕೆ ಕಾರಣವಾಗುವಂತಹ ಯಾವುದೇ ಅಂಶ ಅಥವಾ ಸೇವೆಗಳನ್ನು ಒದಗಿಸುತ್ತಿಲ್ಲ ಎಂಬುದಾಗಿ ಖಾತ್ರಿಪಡಿಸಿಕೊಳ್ಳಬೇಕೆಂದೂ ಎಚ್ಚರಿಕೆ ನೀಡಲಾಗಿದೆ.ಈ ನಿಯಮಗಳು ಚೀನೀ ಯುವಜನರು ಸ್ಮಾರ್ಟ್ ಫೋನ್ ಗೀಳು ಅಥವಾ ವ್ಯಸನಕ್ಕೆ ತುತ್ತಾಗುವುದನ್ನು ತಡೆಯುವಲ್ಲಿ ಸರಿಯಾದ ಕ್ರಮವಾಗಿರಲಿದೆ ಎಂದು ನಿಯಮ ನಿರೂಪಕರು ಹೇಳಿದ್ದಾರೆ. ಆದಾಗ್ಯೂ ಇದು ಎಷ್ಟು ಪರಿಣಾಮಕಾರಿಯಾಗಲಿದೆ ಎಂಬುದನ್ನು ಬಳಿಕವೇ ನೋಡಬೇಕಿದೆಯಾದರೂ, ಸರ್ವಾಕಾರಿ ವ್ಯವಸ್ಥೆ ಇರುವ ಚೀನಾದಲ್ಲಿ ಇಂತಹ ಕಠಿಣ ನಿಯಮಗಳನ್ನು ಜಾರಿಗೆ ತರಲು ಅವಕಾಶವಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!