ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾ ನಮ್ಮ ಶತ್ರು ದೇಶ ಅಲ್ಲ ಎಂದು ಕಾಂಗ್ರೆಸ್ ಪಕ್ಷದ ವಿದೇಶಿ ಘಟಕದ ಮುಖ್ಯಸ್ಥರಾಗಿರುವ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಹೇಳಿಕೆ ನೀಡಿದ್ದು, ಹೊಸ ರಾಜಕೀಯ ವಿವಾದವನ್ನು ಹುಟ್ಟುಹಾಕಿದ್ದಾರೆ.
ಚೀನಾದಿಂದ ಬರುವ ಬೆದರಿಕೆಯನ್ನು ಬೇಕೆಂದೇ ಅತಿರೇಕವಾಗಿ ಬಿಂಬಿಸಲಾಗುತ್ತಿದೆ. ಭಾರತವು ಚೀನಾವನ್ನು ಶತ್ರು ಎಂದು ಪರಿಗಣಿಸುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.
ಚೀನಾದಿಂದ ಬರುವ ಬೆದರಿಕೆ ನನಗೆ ಅರ್ಥವಾಗುತ್ತಿಲ್ಲ. ಅಮೆರಿಕವು ಶತ್ರುವನ್ನು ವ್ಯಾಖ್ಯಾನಿಸುವ ಪ್ರವೃತ್ತಿಯನ್ನು ಹೊಂದಿರುವುದರಿಂದ ಈ ವಿಷಯವು ಹೆಚ್ಚಾಗಿ ಅತಿರೇಕಕ್ಕೆ ಹೋಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದಿಂದ ಬರುವ ಬೆದರಿಕೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಸ್ಯಾಮ್ ಪಿತ್ರೋಡಾ ಉತ್ತರಿಸಿದ್ದಾರೆ.
ನಾವು ಈ ಮನಸ್ಥಿತಿಯನ್ನು ಬದಲಾಯಿಸಬೇಕು ಮತ್ತು ಯಾವಾಗಲೂ ಚೀನಾ ಶತ್ರು ದೇಶ ಎಂದು ಪರಿಗಣಿಸುವುದನ್ನು ನಿಲ್ಲಿಸಬೇಕು. ಇದು ಚೀನಾಕ್ಕೆ ಮಾತ್ರವಲ್ಲ, ಎಲ್ಲರಿಗೂ ಅನ್ಯಾಯವಾಗಿದೆ ಎಂದು ಪಿತ್ರೋಡಾ ಹೇಳಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ, ನಮ್ಮ ಭೂಮಿಯಲ್ಲಿ 40,000 ಚದರ ಕಿ.ಮೀ. ಭೂಮಿಯನ್ನು ಚೀನಾಕ್ಕೆ ಬಿಟ್ಟುಕೊಟ್ಟವರಿಗೆ ಇನ್ನೂ ಚೀನಾದಿಂದ ಯಾವುದೇ ಬೆದರಿಕೆ ಕಾಣುತ್ತಿಲ್ಲ. ರಾಹುಲ್ ಗಾಂಧಿ ಪೀಪಲ್ಸ್ ಲಿಬರೇಶನ್ ಪಾರ್ಟಿ ಆಫ್ ಚೀನಾದೊಂದಿಗೆ ರಹಸ್ಯ ಒಪ್ಪಂದಕ್ಕೂ ಸಹಿ ಹಾಕಿದ್ದಾರೆ. ರಾಜೀವ್ ಗಾಂಧಿ ಚೀನಾದಿಂದ ಹಣವನ್ನು ಪಡೆದಿದ್ದರು. ಜವಾಹರಲಾಲ್ ನೆಹರು ಅಕ್ಸಾಯ್ ಚಿನ್ ಮತ್ತು UNSCಯಲ್ಲಿ ಭಾರತದ ಸ್ಥಾನವನ್ನು ಚೀನಾಕ್ಕೆ ನೀಡಿದರು. ಕಾಂಗ್ರೆಸ್ ಮತ್ತು ಚೀನಾ ನಡುವಿನ ಸ್ನೇಹವು ತುಂಬಾ ಹಳೆಯದು ಎಂದು ಟೀಕಿಸಿದೆ.