ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಚೀನಾ ನ್ಯುಮೋನಿಯಾ ಬಗ್ಗೆ ಕಟ್ಟೆಚ್ಚರ ವಹಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯುಮೋನಿಯಾ ಹರಡುತ್ತಿದೆ ಎಂಬ ವರದಿಗಳ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಪ್ರಕಟಿಸಿದೆ. ಇದೇ ರೀತಿ ಕೇಂದ್ರ ಸರ್ಕಾರವೂ ಈ ಸಂಬಂಧ ಮಾರ್ಗಸೂಚಿ ಪ್ರಕಟಿಸಿದೆ ಎಂದು ಹೇಳಿದರು.
ರಾಜ್ಯದಲ್ಲಿ ಇದುವರೆಗೆ ಚೀನಾ ನ್ಯುಮೋನಿಯಾಗೆ ಸಂಬಂಧಿಸಿದ ವೈರಸ್ ಪತ್ತೆಯಾಗಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಆಸ್ಪತ್ರೆಗಳಲ್ಲೂ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಈ ಸಂಬಂಧ ಅಣಕು ಪ್ರದರ್ಶನ ನಡೆಸಿ ಎಚ್ಚರಿಕೆ ಮೂಡಿಸಬೇಕು ಎಂಬುದೂ ಸೇರಿದಂತೆ ಹಲವು ಬಗೆಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಬಳಕೆ ಮಾಡಲು ಆದ್ಯತೆ ನೀಡುವಂತೆ ಹೇಳಲಾಗಿದೆ ಎಂದರು.
ಜ್ವರ ಬಂದ ತಕ್ಷಣ ಜನ ಆಸ್ಪತ್ರೆಗಳಿಗೆ ತೆರಳಿ ವಿವಿಧ ಪರೀಕ್ಷೆಗಳಿಗೆ ಒಳಪಡಬೇಕು. ಈ ಶೀತಜ್ವರ ಸಾಮಾನ್ಯವಾಗಿ ಐದು ದಿನಗಳವರೆಗೆ ಇರುತ್ತದೆ. ಹೀಗಾಗಿ ಯಾವ ಕಾರಣಕ್ಕೂ ನಿರ್ಲಕ್ಷಿಸಬಾರದು ಎಂದು ಹೇಳಿದರು. ವಯೋವೃದ್ಧರು ಮತ್ತು ಮಕ್ಕಳು ಎಚ್ಚರಿಕೆಯಿಂದ ಇರಬೇಕು. ಅದೇ ರೀತಿ ವಿವಿಧ ರೋಗಗಳಿಂದ ಬಳಲುತ್ತಿರುವವರು ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.
ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರಗಳನ್ನು ಬಳಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಆಗಾಗ ಕೈ ತೊಳೆಯುತ್ತಿರಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಜನರಿಗೆ ಮನವಿ ಮಾಡಿಕೊಂಡರು.