ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತಕ್ಕೆ ಭೇಟಿ ನೀಡಿರುವ ಚೈನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ದೆಹಲಿಯಲ್ಲಿ ಮಾತುಕತೆ ನಡೆಸಿದರು.
ಸಭೆಯಲ್ಲಿ ಡಾ. ಎಸ್. ಜೈಶಂಕರ್, ದ್ವಿಪಕ್ಷೀಯ ಸಂಬಂಧಗಳಲ್ಲಿ ಅತ್ಯಂತ ಕಠಿಣ ಅವಧಿಯನ್ನು ಎದುರಿಸಿದ ಬಳಿಕ ಭಾರತ ಮತ್ತು ಚೈನಾ ಮತ್ತೊಮ್ಮೆ ಉತ್ತಮ ಬಾಂಧವ್ಯ ಮುಂದುವರೆಸಲು ಬಯಸುತ್ತಿವೆ. ಇದಕ್ಕೆ ಎರಡೂ ಕಡೆಯಿಂದ ಪ್ರಾಮಾಣಿಕ ಮತ್ತು ರಚನಾತ್ಮಕ ವಿಧಾನದ ಅಗತ್ಯವಿದೆ. ಈ ಪ್ರಯತ್ನದಲ್ಲಿ ಉಭಯ ರಾಷ್ಟ್ರಗಳು ಪರಸ್ಪರ ಗೌರವ, ಸಂವೇದನೆ ಮತ್ತು ಹಿತಾಸಕ್ತಿಯ ತತ್ವಗಳಿಗೆ ಬದ್ಧವಾಗಿರಬೇಕು ಎಂದು ತಿಳಿಸಿದರು.
ಜಾಗತಿಕ ಪರಿಸ್ಥಿತಿ ಮತ್ತು ಪರಸ್ಪರ ಆಸಕ್ತಿಯ ಕೆಲವು ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಇದು ಸೂಕ್ತ ಸಮಯವಾಗಿದೆ. ಆರ್ಥಿಕ ಮತ್ತು ವ್ಯಾಪಾರ ಸಮಸ್ಯೆಗಳು, ಸಂಪರ್ಕ, ನದಿ ದತ್ತಾಂಶ ಹಂಚಿಕೆ, ಗಡಿ ವ್ಯಾಪಾರ, ತೀರ್ಥಯಾತ್ರೆಗಳು ಮತ್ತು ದ್ವಿಪಕ್ಷೀಯ ವಿನಿಮಯಗಳನ್ನು ಈ ಮಾತುಕತೆ ಹೊಂದಿದೆ ಎಂದು ವಿವರಿಸಿದರು. ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಜಂಟಿಯಾಗಿ ಕಾಯ್ದುಕೊಳ್ಳುವ ಮತ್ತು ಉದ್ವಿಗ್ನತೆಯನ್ನು ಶಾಶ್ವತವಾಗಿ ಶಮನಗೊಳಿಸುವ ವಿಚಾರದಲ್ಲಿ ಉಭಯ ರಾಷ್ಟ್ರಗಳ ಪ್ರಯತ್ನ ಮುಂದುವರೆಯಲಿದೆ ಎಂದು ಡಾ. ಎಸ್. ಜೈಶಂಕರ್ ತಿಳಿಸಿದರು.