ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಂಕಾಂಗ್ ಮೂಲದ ಪ್ರಜಾತಂತ್ರ ಪರ ಮಾಧ್ಯಮ ಪ್ರಮುಖರೂ , ಕಮ್ಯುನಿಸ್ಟ್ ಚೀನಾದ ವಿಮರ್ಷಕರೂ ಆಗಿರುವ ಬ್ರಿಟಿಷ್ ನಾಗರಿಕ ಜಿಮ್ಮಿ ಲೈಗೆ ಬಂಧನದ ನಾಲ್ಕು ವರ್ಷಗಳ ಬಳಿಕ , ದೇಶದ್ರೋಹದ ಆರೋಪ ಹೊರಿಸಿ ಸೋಮವಾರ ೨೦ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿರುವುದನ್ನು ವಿಶ್ವದಾದ್ಯಂತ ಖಂಡಿಸಲಾಗಿದೆ.
ಲೈ ಆಪಲ್ ಪತ್ರಿಕೆಯ ಸ್ಥಾಪಕರಾಗಿದ್ದು, ಇದೀಗ ಕಮ್ಯುನಿಸ್ಟ್ ಸರಕಾರದ ದಮನ ನೀತಿಯಿಂದಾಗಿ ಆ ಪತ್ರಿಕೆ ಸ್ಥಗಿತಗೊಂಡಿದೆ.
೨೦೨೦ರಲ್ಲಿ ಬಂಧಿಸಲ್ಪಟ್ಟಿದ್ದ ೭೮ವರ್ಷ ಪ್ರಾಯದ ಲೈ ಅವರು ವಿದೇಶಿ ಶಕ್ತಿಗಳೊಂದಿಗೆ ಸೇರಿ ದೇಶದ ಭದ್ರತೆಗೆ ಅಪಾಯ ಒಡ್ಡಿದ್ದಾರೆ ಎಂಬುದಾಗಿ ಚೀನಾದ ರಾಷ್ಟ್ರೀಯ ಭದ್ರತಾ ಕಾನೂನಿನಡಿ ಆರೋಪಿಸಿ ಅಪರಾಧಿ ಎಂದು ಘೋಷಿಸಲಾಗಿದೆ.
ಈಗಾಗಲೇ ಅವರ ವಿರುದ್ಧ ಹೊರಿಸಲಾದ ವಿವಿಧ ಕ್ರಿಮಿನಲ್ ಆರೋಪಗಳಡಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಲೈಗೆ ಇದೀಗ ಮತ್ತೆ ೨೦ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ.
ಈ ಹಿಂದೆ ಖ್ಯಾತ ಕಾನೂನು ತಜ್ಞ ಬೆನ್ನಿ ಟಾಯ್ ಅವರಿಗೆ ೧೦ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು ಈ ವರೆಗಿನ ದಾಖಲೆಯಾಗಿದ್ದು, ಇದೀಗ ವಯೋವೃದ್ಧ ಲೈ ಅವರಿಗೆ ಇದರ ದುಪ್ಪಟ್ಟು ಅವಽಯ ಶಿಕ್ಷೆ ವಿಧಿಸಲಾಗಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಚೀನಾದಲ್ಲಿ ಪ್ರಜಾತಂತ್ರ ಪರರನ್ನು , ಕಮ್ಯುನಿಸ್ಟ್ ಸರ್ವಾಧಿಕಾರವನ್ನು ಟೀಕಿಸುವವರನ್ನು ಜೈಲಿಗಟ್ಟುವುದು ಸಾಮಾನ್ಯವಾಗಿದ್ದು, ಇತ್ತೀಚೆಗೆ ಚೀನೀ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಿಲುವನ್ನು ಒಪ್ಪದ ಹಲವು ಸೇನಾಧಿಕಾರಿಗಳನ್ನು ವಿವಿಧ ಆರೋಪಗಳಡಿ ಬಂಧಿಸಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ಅವರ ವಿರುದ್ಧ ವಿದೇಶಿ ಶಕ್ತಿಗಳ ಜೊತೆ ಕೈಜೋಡಿಸಿದ ಆರೋಪ ಹೊರಿಸುವ ಜೊತೆಗೆ ‘ದೇಶ ವಿರೋಧಿ’ವಿಚಾರಗಳನ್ನು ಪ್ರಕಟಿಸಲು ಸಂಚು ಹೂಡಿದ ಆರೋಪವನ್ನೂ ಮಾಡಲಾಗಿದೆ.
ಈಗಾಗಲೇ ೫ವರ್ಷ ೯ತಿಂಗಳು ಜೈಲಲ್ಲಿ ಕಳೆದಿರುವ ಅವರು ಇನ್ನೂ ೧೮ವರ್ಷಗಳ ಕಾಲ ಜೈಲಿನಲ್ಲಿ ಕೊಳೆಯಬೇಕಾಗಿದ್ದು, ಅವರು ಪೂರ್ಣಾವಧಿ ಜೈಲು ಶಿಕ್ಷೆ ಪೂರೈಸಿ ಹೊರಬರುವ ಸಂದರ್ಭ ಅವರಿಗೆ ೯೬ವರ್ಷ ಪ್ರಾಯವಾಗಲಿದ್ದು, ಇದು ಮರಣದಂಡನೆ ಶಿಕ್ಷೆಯೇ ಆಗಿರಲಿದ್ದು, ಅತ್ಯಂತ ಕ್ರೂರವಾಗಿದೆ ಎಂದು ಯುರೋಪಿಯನ್ ಯೂನಿಯನ್ , ಯು.ಕೆ., ಮಾನವ ಹಕ್ಕು ಸಂಸ್ಥೆಗಳು ಖಂಡಿಸಿವೆ.



