March 11, 2026
Wednesday, March 11, 2026
spot_img

ಭಾರತದ ಗಡಿಯೊಳಗೆ ಅನುಮಾನಾಸ್ಪದ ಓಡಾಟ: ಚೀನಾ ಪ್ರಜೆ ಅರೆಸ್ಟ್‌

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಗಡಿಯೊಳಗೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಚೀನಾ ಪ್ರಜೆಯೊಬ್ಬ ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ) ಸೈನಿಕರ ಬಲೆಗೆ ಬಿದ್ದಿದ್ದಾನೆ.

ಈತ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಭಾರತ-ನೇಪಾಳ ಗಡಿಯಲ್ಲಿರುವ ರುಪೈದಿಹಾ ಚೆಕ್‌ಪೋಸ್ಟ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ. ಆರೋಪಿ ಗಡಿಯೊಳಗೆ ಪ್ರವೇಶಿಸಿದ್ದು ಮಾತ್ರವಲ್ಲದೇ ಅಲ್ಲಿ ವಿಡಿಯೊಗಳನ್ನು ಚಿತ್ರೀಕರಿಸುತ್ತಿದ್ದ ಎನ್ನಲಾಗಿದೆ.

ಬಂಧಿತ ವ್ಯಕ್ತಿಯನ್ನು 36 ವರ್ಷದ ಲಿಯು ಕುನ್ಜಿಂಗ್ ಎಂದು ಗುರುತಿಸಲಾಗಿದ್ದು, ಚೀನಾದ ಹುನಾನ್ ನಿವಾಸಿಯಾಗಿರುವ ಈತ ಅಕ್ರಮವಾಗಿ ಭಾರತದ ಗಡಿಯೊಳಗೆ ಪ್ರವೇಶಿಸಿದ್ದಾನೆ ಎಂಬುದು ತಿಳಿದುಬಂದಿದೆ.

ಈತ ನೇಪಾಳ, ಪಾಕಿಸ್ತಾನಕ್ಕೂ ಈ ಹಿಂದೆ ಪ್ರಯಾಣ ಬೆಳೆಸಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದ್ದು, ಆತನಿಂದ ಚೀನಾ, ಪಾಕಿಸ್ತಾನ, ಮತ್ತು ನೇಪಾಳ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಎಸ್‌ಬಿ ಅಧಿಕಾರಿಗಳು ತಿಳಿಸಿದ್ದಾರೆ. ಈತ ನೇಪಾಳದಿಂದ ಅಕ್ರಮ ಮಾರ್ಗದ ಮೂಲಕ ಭಾರತಕ್ಕೆ ನುಸುಳಿ ಗಡಿ ಪ್ರದೇಶದ ವಿಡಿಯೋ ಚಿತ್ರೀಕರಣ ಮಾಡುತ್ತಿರುವ ವೇಳೆ ಹಿಡಿದು ಬಂಧಿಸಲಾಗಿದೆ ಎಂದು ಎಸ್‌ಎಸ್‌ಬಿಯ 42ನೇ ಬೆಟಾಲಿಯನ್‌ನ ಕಮಾಂಡೆಂಟ್ ಗಂಗಾ ಸಿಂಗ್ ಉದಾವತ್ ತಿಳಿಸಿದ್ದಾರೆ.

ಅವನಿಂದ ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದು, ಆತನ ಬಳಿ ನೇಪಾಳದ ನಕ್ಷೆ ದೊರಕಿದ್ದು, ನಕ್ಷೆಯಲ್ಲಿ ಕೆಲ ಮಾಹಿತಿಯನ್ನು ಇಂಗ್ಲೀಷ್‌ನಲ್ಲಿ ಬರೆಯಲಾಗಿತ್ತು. ಈ ಕುರಿತು ಅಧಿಕಾರಿಗಳು ಪ್ರಶ್ನೆ ಮಾಡಿದಾಗ ಆತ ತನಗೆ ಹಿಂದಿ ಮತ್ತು ಇಂಗ್ಲೀಷ್‌ ಬರುವುದಿಲ್ಲ ಎಂದು ಕೈ ಸನ್ನೆಯ ಮೂಲಕ ತಿಳಿಸಿದ್ದಾನೆ. ಎಸ್‌ಎಸ್‌ಬಿ, ಪೊಲೀಸರು ಮತ್ತು ಇತರ ಭದ್ರತಾ ಸಂಸ್ಥೆಗಳು ವಿಚಾರಣೆಗೆ ಒಳಪಡಿಸಿದಾಗ ತಾನು ಚೀನಾ ಮೂಲದ ಪ್ರಜೆ, ಪಾಕಿಸ್ತಾನಕ್ಕೂ ಭೇಟಿ ನೀಡಿದ್ದೇನೆಂದು ತಿಳಿಸಿದ್ದಾನೆ ಎಂದು ಕಮಾಂಡೆಂಟ್ ಮಾಹಿತಿ ಹಂಚಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !