ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ವಿರುದ್ಧ ಚೀನಾ ಸಂಚು ರೂಪಿಸುತ್ತಿದೆಯೇ? ತನ್ನ ಗೂಢಚಾರರನ್ನು ಭಾರತಕ್ಕೆ ಕಳುಹಿಸಿದೆಯೇ? ಎಂಬ ಅನುಮಾನಗಳು ವ್ಯಕ್ತವಾಗಿದೆ. ಯಾಕಂದರೆ ದೆಹಲಿಯಲ್ಲಿ ತನ್ನ ಹೆಸರನ್ನು ಬದಲಿಸಿ ನಕಲಿ ಗುರುತಿನ ಚೀಟಿಯೊಂದಿಗೆ ಬೌದ್ಧ ಸನ್ಯಾಸಿಯಂತೆ ವೇಷ ಧರಿಸಿದ್ದ ಚೀನಾದ ಮಹಿಳೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಚೀನಾದ ಹೆನಾನ್ ಪ್ರಾಂತ್ಯದ ‘ಕೈ ರೂವೋ’ ಎಂಬ ಮಹಿಳೆಯನ್ನು ದೆಹಲಿಯಲ್ಲಿ ಬೌದ್ಧ ಸನ್ಯಾಸಿ ಎಂದು ಗುರುತಿಸಲಾಗಿದೆ. ಆಕೆ ತನ್ನ ಹೆಸರನ್ನು ‘ದಲ್ಮಾ ಲಾಮಾ’ ಎಂದು ಬದಲಾಯಿಸಿಕೊಂಡು ದೆಹಲಿಯಲ್ಲಿ ವಾಸಿಸುತ್ತಿದ್ದಳು ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಉತ್ತರ ದೆಹಲಿಯ ಡಿಟೆಟನ್ ನಿರಾಶ್ರಿತರ ವಸಾಹತು ಮಜ್ನುಕಾ ತಿಲಾದಲ್ಲಿ ಬೌದ್ಧ ಸನ್ಯಾಸಿಯಂತೆ ವೇಷ ಧರಿಸಿದ್ದ ಆಕೆಯನ್ನು ದೆಹಲಿ ಪೊಲೀಸರು ಬಂಧಿಸಿ, ಡೊಲ್ಮಾ ಲಾಮಾ ಹೆಸರಿನಲ್ಲಿದ್ದ ನೇಪಾಳದ ಪೌರತ್ವ ಪ್ರಮಾಣಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಹಿಳೆಯನ್ನು ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿಯಲ್ಲಿ ವಿಚಾರಣೆಗೊಳಪಡಿಸಿದಾಗ ಆಕೆ ಚೀನಾ ಪ್ರಜೆ ಎಂಬುದು ದೃಢಪಟ್ಟಿದೆ. ಅಲ್ಲದೆ 2019ರಿಂದ ಆಕೆ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ.
ಆಕೆ ಚೀನಾದ ಗೂಢಚಾರಿಣಿಯಾಗಿರಬಹುದು ಎಂದು ಹಲವು ಅನುಮಾನಗಳು ವ್ಯಕ್ತವಾಗಿವೆ. ಆಕೆಯ ವಿರುದ್ಧ ಐಪಿಸಿಯ 120ಬಿ (ಕ್ರಿಮಿನಲ್ ಪಿತೂರಿ), 419 (ವೈಯಕ್ತಿಕ ವಂಚನೆ), 420 (ವಂಚನೆ), 467 ಭದ್ರತಾ ಫೋರ್ಜರಿ ಮುಂತಾದ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಆಕೆಯ ಗುರುತಿನ ಚೀಟಿಯಲ್ಲಿ ನೇಪಾಳದ ರಾಜಧಾನಿ ಕಠ್ಮಂಡುವಿನ ವಿಳಾಸವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯನ್ನು ವಿಚಾರಣೆ ನಡೆಸಿದಾಗ ಆಕೆಯನ್ನು ಚೀನಾದ ಕಮ್ಯುನಿಸ್ಟ್ ಪಕ್ಷದ ಕೆಲವು ನಾಯಕರು ತನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅದಕ್ಕಾಗಿಯೇ ಇಲ್ಲಿ ಅಡಗಿಕೊಂಡಿದ್ದೇನೆ ಎಂದು ಬಾಯ್ಬಿಟ್ಟಿದ್ದಾರೆ. ಆದರೆ ಅವರ ಹೇಳಿಕೆ ನಂಬಲರ್ಹವಲ್ಲ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.