ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡಕ್ಕೆ ಅಭಿನಂದನೆ ಸಲ್ಲಿಸಲು ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಮಾನತುಗೊಳಿಸಿದ್ದ ಐಪಿಎಸ್ ಅಧಿಕಾರಿಗಳ ವಿರುದ್ಧದ ಕ್ರಮಕ್ಕೆ ಈಗ ಕೇಂದ್ರ ಸರ್ಕಾರವೂ ಅಸ್ತು ಎಂದಿದೆ.
ಮಾಜಿ ಬೆಂಗಳೂರು ಪೊಲೀಸ್ ಆಯುಕ್ತ ಎಡಿಜಿಪಿ ಬಿ. ದಯಾನಂದ್, ಐಜಿಪಿ ವಿಕಾಸ್ ಕುಮಾರ್ ವಿಕಾಸ್ ಹಾಗೂ ಡಿಸಿಪಿ ಶೇಖರ್ ಟೆಂಕಣ್ಣನವರ್ ಅವರನ್ನು ರಾಜ್ಯ ಸರ್ಕಾರ ಜೂನ್ 5ರಂದು ಅಮಾನತುಗೊಳಿಸಿತ್ತು. ಈ ಸಂಬಂಧ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕೇಂದ್ರಕ್ಕೆ ವರದಿ ಸಲ್ಲಿಸಿದ್ದು, ಇದೀಗ ಕೇಂದ್ರ ಸರ್ಕಾರ ಆ ಕ್ರಮಕ್ಕೆ ಅನುಮೋದನೆ ನೀಡಿದೆ.
ಈ ದುರಂತವು ಭದ್ರತಾ ಲೋಪ ಹಾಗೂ ಅಧಿಕಾರಿಗಳ ಸಂವಹನ ವೈಫಲ್ಯದ ಫಲವಾಗಿದೆ ಎಂಬುದು ಸರ್ಕಾರದ ಅಭಿಪ್ರಾಯ. ಸರಿಯಾದ ಜನ ನಿರ್ವಹಣಾ ವ್ಯವಸ್ಥೆ ರೂಪಿಸದೆ, ಅಭಿಮಾನಿಗಳ ಸಂಖ್ಯೆಯನ್ನು ತಪ್ಪಾಗಿ ಅಂದಾಜಿಸಿ, ಮುನ್ನೆಚ್ಚರಿಕೆಯನ್ನು ಕೈಗೊಳ್ಳದೆ ನಿರ್ಲಕ್ಷ್ಯ ತೋರಲಾಗಿದೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ತಕ್ಷಣವೇ ಕ್ರಮ ಕೈಗೊಂಡಿದ್ದು, ಅಧಿಕೃತವಾಗಿ ಅಮಾನತು ಆದೇಶ ನೀಡಿದೆ. ಇಂದಿನ ಬೆಳವಣಿಗೆಯು ಸರ್ಕಾರಕ್ಕೆ ರಾಜಕೀಯವಾಗಿ ಬಲ ನೀಡಿದೆ. ಐಪಿಎಸ್ ಅಧಿಕಾರಿಗಳ ಅಮಾನತಿಗೆ ಕೇಂದ್ರ ಸರ್ಕಾರದ ಸಮ್ಮತಿ ದೊರೆತಿರುವುದು, ಮುಂದಿನ ತನಿಖಾ ಪ್ರಕ್ರಿಯೆಗೆ ದಿಕ್ಕು ತೋರಿಸಲಿದೆ.