ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ: RCB, KSCA, DNA ವಿರುದ್ಧ ಕ್ರಿಮಿನಲ್ ಕೇಸ್! ಸಚಿವ ಸಂಪುಟ ನಿರ್ಧಾರ
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಜೂನ್ 4ರಂದು ಐಪಿಎಲ್ ಟ್ರೋಫಿ ಜಯದ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತದ ಪ್ರಕರಣ ತೀವ್ರ ತಿರುವು ಪಡೆಯುತ್ತಿದ್ದು,ಘಟನೆಗೆ ಸಂಬಂಧಿಸಿದಂತೆ, ಕರ್ನಾಟಕ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದ್ದು, ಇದರಲ್ಲಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವು ಪ್ರಮುಖ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಮಾಜಿ ನ್ಯಾಯಮೂರ್ತಿ ಡಿ. ಮೈಕಲ್ ಕುನ್ಹಾ ನೇತೃತ್ವದ ಏಕಸದಸ್ಯ ಆಯೋಗ ಈ ಘಟನೆಯ ಕುರಿತು ಸಿದ್ಧಪಡಿಸಿದ್ದ ವರದಿಯ ಪ್ರಕಾರ, ಚಿನ್ನಸ್ವಾಮಿ ಮೈದಾನದಲ್ಲಿ RCB, ಡಿಎನ್ಎ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ನಿರ್ಲಕ್ಷ್ಯದಿಂದಾಗಿ ಈ ದುರಂತ ಸಂಭವಿಸಿದೆ ಎಂದು ಉಲ್ಲೇಖಿಸಲಾಗಿದೆ. ಈ ವರದಿ ಆಧಾರವಾಗಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ, ಈ ಮೂರು ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ತೀರ್ಮಾನಿಸಲಾಗಿದೆ.
ಕಾನೂನು ಪ್ರಕಾರ ಹಾಗೂ ಆಯೋಗದ ಶಿಫಾರಸುಗಳನ್ವಯ, RCB ತಂಡದ ಪ್ರತಿನಿಧಿ ರಾಜೇಶ್ ಮೆನನ್, ಡಿಎನ್ಎ ಕಂಪನಿಯ ಎಂಡಿ ವೆಂಕಟ್ ವರ್ಧನ್ ಹಾಗೂ ಉಪಾಧ್ಯಕ್ಷ ಸುನೀಲ್ ಮಾಥೂರ್, KSCA ಅಧ್ಯಕ್ಷ ರಘುರಾಮ್ ಭಟ್, ಮಾಜಿ ಕಾರ್ಯದರ್ಶಿ ಎ. ಶಂಕರ್ ಮತ್ತು ಖಜಾಂಚಿ ಜಯರಾಮ್ ವಿರುದ್ಧ ಕೇಸ್ ದಾಖಲಾಗುವ ಸಾಧ್ಯತೆ ಇದೆ.
ಪೊಲೀಸ್ ಇಲಾಖೆಯಲ್ಲೂ ಅನೇಕ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯವೂ ವರದಿಯಲ್ಲಿದೆ. ಬಿ. ದಯಾನಂದ್ (ಮಾಜಿ ಪೊಲೀಸ್ ಕಮಿಷನರ್), ಐಪಿಎಸ್ ಅಧಿಕಾರಿಗಳಾದ ವಿಕಾಸ್ ಕುಮಾರ್, ಶೇಖರ್, ಎಸಿಪಿ ಬಾಲಕೃಷ್ಣ ಹಾಗೂ ಪಿಐ ಗಿರೀಶ್ ಅವರ ಮೇಲೂ ತನಿಖೆಗೆ ಶಿಫಾರಸ್ಸು ಮಾಡಲಾಗಿದೆ.