ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯು ಸಾರ್ವಜನಿಕ ಸಮಾರಂಭಗಳಲ್ಲಿ ಜನಸಂದಣಿ ನಿಯಂತ್ರಣಕ್ಕಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹೆಚ್ಚು ಜನ ಸೇರುವ ಕಾರ್ಯಕ್ರಮಗಳಲ್ಲಿ ಜನಜಂಗುಳಿ ನಿಯಂತ್ರಣಕ್ಕೆ ಈ ಮಾರ್ಗಸೂಚಿ ಜಾರಿಗೆ ತರಲಾಗಿದ್ದು, ಯಾವುದೇ ಬಹಳಷ್ಟು ಸಂಖ್ಯೆಯಲ್ಲಿ ಜನ ಸೇರುವ ಸಭೆ ಸಮಾರಂಭಗಳಿಗೆ ಈ ಮಾರ್ಗಸೂಚಿಗಳು ಅನ್ವಯವಾಗಲಿದೆ.
ಈ ಬಗ್ಗೆ ಡಿಜಿ-ಐಜಿಪಿ ಡಾ. ಎಂ.ಎ.ಸಲೀಂ ಅವರು ಸುತ್ತೋಲೆ ಹೊರಡಿಸಿದ್ದು, ಜನಸಂದಣಿ ನಿರ್ವಹಣೆಗಾಗಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಎಸ್‌ಒಪಿಯಲ್ಲಿ ತಿಳಿಸಲಾಗಿದೆ.
ಏನಿದು ಎಸ್‌ಒಪಿ?
ಹಬ್ಬಗಳು, ರ‍್ಯಾಲಿಗಳು, ಕ್ರೀಡೆಗಳು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನಸಂದಣಿ ನಿರ್ವಹಣೆಗೆ ಸೂಕ್ತ ಕಾರ್ಯತಂತ್ರದ ಅಗತ್ಯವಿದೆ. ಸಾರ್ವಜನಿಕ ಸುರಕ್ಷತೆಗಾಗಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು, ಜನಸಂದಣಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪ್ರಮಾಣೀಕೃತ ಚೌಕಟ್ಟನ್ನು ಒದಗಿಸಲು ಈ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (ಎಸ್‌ಒಪಿ)ಯನ್ನು ಅನ್ನು ರೂಪಿಸಲಾಗಿದೆ.
ದೊಡ್ಡ ಕಾರ್ಯಕ್ರಮಗಳಲ್ಲಿ ಜನಸಂದಣಿ ನಿಯಂತ್ರಣಕ್ಕೆ ಕ್ರಮ ಮತ್ತು ಕಾರ್ಯಗತಗೊಳಿಸಲು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡುವುದು, ಅಪಾಯಗಳನ್ನು ಕಡಿಮೆ ಮಾಡುವುದು, ಸಮನ್ವಯವನ್ನು ಹೆಚ್ಚಿಸುವುದು ಮತ್ತು ತುರ್ತು ಪರಿಸ್ಥಿತಿಗಳಿಗೆ ತ್ವರಿತ ಪ್ರತಿಕ್ರಿಯೆಯನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.
ಎಸ್‌ಒಪಿ ಮಾರ್ಗಸೂಚಿಯಲ್ಲೇನಿದೆ?
ಜನಸಂದಣಿ ನಿರ್ವಹಣೆಗೆ ಪೂರ್ವ ಸಿದ್ಧತೆ, ಆಯೋಜಕರ ಜತೆ ಸಮನ್ವಯ ಹಾಗೂ ಪೊಲೀಸ್ ಬಂದೋಬಸ್ತ್‌ಗೆ ಅಗತ್ಯ ಕ್ರಮ ವಹಿಸಬೇಕು.
ಜನಸಮೂಹದ ವರ್ತನೆ ಪರಿಶೀಲಿಸುವುದು, ಬಾಟಲ್ ನೆಕ್‌ಗಳು, ಎಕ್ಸಿಟ್‌ಗಳನ್ನು ಗುರುತಿಸುವ ಮೂಲಕ ಲಭ್ಯವಿರುವ ಪರಿಕರಗಳನ್ನು ಬಳಸಿಕೊಂಡು ಸಂಭಾವ್ಯ ಅವಘಡ ತಡೆಯವುದು.
ಸ್ಥಳ ಸಾಮರ್ಥ್ಯದ ಮಿತಿಗಳು, ಪ್ರವೇಶ/ನಿರ್ಗಮನ ಮಾರ್ಗಗಳು, ತುರ್ತು ಸ್ಥಳಾಂತರಿಸುವ ಯೋಜನೆಗಳು ಮತ್ತು ಸಂವಹನ ಮೂಲಸೌಕರ್ಯ ಸೇರಿ ಸುರಕ್ಷತಾ ಮಾನದಂಡ ಖಚಿತಪಡಿಸಿಕೊಳ್ಳಬೇಕು.
ಸುರಕ್ಷತಾ ಪರಿಶೀಲನೆಯಲ್ಲಿ ವಿಫಲವಾದ ಸ್ಥಳಗಳಲ್ಲಿ ಬೃಹತ್ ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸಬೇಕು.
ಕಾರ್ಯಕ್ರಮಗಳಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಬೇಕು.
ಆಂಬ್ಯುಲೆನ್ಸ್, ಪಾರ್ಕಿಂಗ್ ಪ್ರದೇಶ ಮತ್ತು ನಿಯಂತ್ರಣ ಕೊಠಡಿ ಮತ್ತಿತರ ವ್ಯವಸ್ಥೆ ಮಾಡಲು ಸೂಚಿಸುವುದು.
ಬೆಂಕಿ, ಕಾಲ್ತುಳಿತ ಇನ್ನಿತರ ಅವಘಡಗಳ ನಿಯಂತ್ರಣಕ್ಕೆ ತುರ್ತು ಸಿದ್ಧತೆ ಮಾಡಿಕೊಳ್ಳುವುದು. ಇದಕ್ಕಾಗಿ ತರಬೇತಿ ಮತ್ತು ಮಾಕ್ ಡ್ರಿಲ್ ಕೈಗೊಳ್ಳುವುದು.
ಜನಸಂದಣಿ ನಿಯಂತ್ರಿಸಲು ಅಥವಾ ಚದುರಿಸಲು ಎಚ್ಚರಿಕೆ ನೀಡಿದ ನಂತರವೇ ಪೊಲೀಸ್ ಸಿಬ್ಬಂದಿ ಬಳಸಬೇಕು ಮತ್ತು ಅನಗತ್ಯವಾಗಿ ಬಂಧನಕ್ಕೆ ಮುಂದಾಗಬಾರದು.
ಭವಿಷ್ಯದ ಸುಧಾರಣೆಗಾಗಿ, ಜನಸಂದಣಿಯ ಸಂಚಾರ, ತೆಗೆದುಕೊಂಡ ನಿರ್ಧಾರಗಳು ಮತ್ತು ನೀಡಿದ ಎಚ್ಚರಿಕೆಗಳನ್ನು ಆಡಿಯೋ/ವಿಡಿಯೋ ದಾಖಲೆಗಳ ಮೂಲಕ ದಾಖಲಿಸಬೇಕು.