ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಾಧೀಶ ಮೈಕಲ್ ಕುನ್ಹಾ ಸಲ್ಲಿಸಿದ್ದ ತನಿಖಾ ವರದಿಯನ್ನು ಪ್ರಶ್ನಿಸಿ ಡಿಎನ್‌ಎ ಎಂಟರ್ಟೈನ್ಮೆಂಟ್ ನೆಟ್‌ವರ್ಕ್ ಲಿಮಿಟೆಡ್ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯ ತೀರ್ಪು ಹೊರಬಿದ್ದಿದೆ.
ದೀರ್ಘ ವಿಚಾರಣೆ ಮತ್ತು ವಾದ–ಪ್ರತಿವಾದಗಳ ನಂತರ, ನ್ಯಾ. ಡಿ.ಕೆ. ಸಿಂಗ್ ಮತ್ತು ನ್ಯಾ. ತಾರಾ ವಿತಾಸ್ತಾ ಗಂಜು ಅವರ ವಿಭಾಗೀಯ ಪೀಠವು ಡಿಎನ್‌ಎ ಸಲ್ಲಿಸಿದ್ದ ಅರ್ಜಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ.
ಕಾಲ್ತುಳಿತದ ಸಂದರ್ಭ, ಭದ್ರತಾ ವೈಫಲ್ಯಗಳು ಮತ್ತು ಕಾರ್ಯಕ್ರಮ ನಿರ್ವಹಣೆಯ ಅಸಮರ್ಪಕತೆ ಕುರಿತು ಕುನ್ಹಾ ಆಯೋಗ ಸಲ್ಲಿಸಿದ್ದ ವರದಿಯ ಹಲವು ನಿರ್ಣಾಯಕ ಭಾಗಗಳು ಡಿಎನ್‌ಎ ಎಂಟರ್ಟೈನ್ಮೆಂಟ್ ನೆಟ್‌ವರ್ಕ್ ವಿರುದ್ಧವಾಗಿ ದಾಖಲಾಗಿತ್ತು. ತನಿಖೆ ಪೂರ್ಣಗೊಳ್ಳುವುದಕ್ಕೂ ಮುನ್ನವೇ ಆರೋಪದ ಶೈಲಿ ಬಳಸಲಾಗಿದೆ, ವರದಿಯಲ್ಲಿ ಪಕ್ಷಪಾತ ಮತ್ತು ಅಪೂರ್ಣ ಪರಿಶೀಲನೆ ಇರುವುದರಿಂದ ಇದು ಮಾನ್ಯವಾಗುವುದಿಲ್ಲ ಎಂಬ ಕಾರಣ ನೀಡಿ ಡಿಎನ್‌ಎ ವರದಿಯನ್ನು ವಜಾಗೊಳಿಸಲು ಮನವಿ ಮಾಡಿತ್ತು.
ಸರ್ಕಾರ ಮತ್ತು ಆಯೋಗದ ಪರ ವಾದಿಸಿದ ವಕೀಲರು, ಸಾಕ್ಷಿಗಳು, ದಾಖಲೆಗಳು ಮತ್ತು ಸ್ಥಳ ಪರಿಶೀಲನೆಗಳ ಆಧಾರದ ಮೇಲೆ ವರದಿ ಸಿದ್ಧಗೊಂಡಿದ್ದು, ಯಾವುದೇ ಪಕ್ಷಪಾತ ನಡೆಸಿಲ್ಲ ಎಂದು ದೃಢವಾಗಿ ವಾದಿಸಿದರು.
ಎಲ್ಲಾ ಅಂಶಗಳನ್ನು ಪರಿಗಣಿಸಿದ ಹೈಕೋರ್ಟ್, ಕುನ್ಹಾ ಆಯೋಗದ ವರದಿಯನ್ನು ರದ್ದುಗೊಳಿಸಲು ಯಾವುದೇ ಕಾನೂನು ಆಧಾರ ಅಥವಾ ಅಗತ್ಯಕರ ಪ್ರಮಾಣಗಳು ಲಭ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದು, ಡಿಎನ್‌ಎ ಅರ್ಜಿಯನ್ನು ತಿರಸ್ಕರಿಸಿದೆ. ಈ ತೀರ್ಪಿನಿಂದ ಕುನ್ಹಾ ಆಯೋಗದ ವರದಿ ಮಾನ್ಯತೆಯನ್ನು ಉಳಿಸಿಕೊಂಡಿದ್ದು, ಪ್ರಕರಣದ ಮುಂದಿನ ಹಂತಗಳಲ್ಲಿ ಇದು ಪ್ರಮುಖ ದಾಖಲೆ ಎನ್ನುವ ಸಾಧ್ಯತೆ ಹೆಚ್ಚಾಗಿದೆ.

