ಹೊಸದಿಗಂತ ವರದಿ,ಮಂಗಳೂರು:
ಚಿತ್ರದುರ್ಗದಲ್ಲಿ ನಡೆದ ಘಟನೆಯ ಸಮಗ್ರ ತನಿಖೆಯಾಗಬೇಕಿದ್ದು, ಮುಖ್ಯಮಂತ್ರಿಗಳು ತಕ್ಷಣ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ತನಿಖಾ ಸಮಿತಿ ನಡೆಸಬೇಕು ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.
ಭಾನುವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗದ ನಗರಸಭೆ ವ್ಯಾಪ್ತಿಯ ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಐದು ಮಂದಿ ಮೃತಪಟ್ಟಿರುವ ಘಟನೆಯನ್ನು ಸರಕಾರ ಗಂಬೀರವಾಗಿ ಪರಿಗಣಿಸಬೇಕು. ಘಟನೆಗೆ ಮೂಲಕ ಕಾರಣ ಅವರು ಸೇವಿಸಿರುವ ಆಹಾರವೇ ಅಥವಾ ನೀರು ಕಾರಣವೇ ಎಂಬುದನ್ನು ಪ್ರಯೋಗಾಲಯ ಪರೀಕ್ಷೆ ಮೂಲಕ ದೃಢಪಡಿಸಬೇಕು. ತಪ್ಪಿತಸ್ಥರೆಲ್ಲರಿಗೂ ತಕ್ಕ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.