ಹೊಸದಿಗಂತ ಚಿತ್ರದುರ್ಗ
ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ ಚಿತ್ರದುರ್ಗ ರೈಲು ನಿಲ್ದಾಣ ಅಭಿವೃದ್ಧಿ ಮಾಡುತ್ತಿದ್ದು, ೨೦೨೫ ರ ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.
ನಗರದ ರೈಲ್ವೆ ನಿಲ್ದಾಣದಲ್ಲಿ ನಿರ್ಮಾಣ ಮಾಡುತ್ತಿರುವ ನೂತನ ಕಟ್ಟಡ ಕಾಮಗಾರಿಯನ್ನು ಗುರುವಾರ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ವಿವಿಧೆಡೆಗಳಲ್ಲಿ ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ ೧೩೦೦ ರೈಲು ನಿಲ್ದಾಣಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಅದರಲ್ಲಿ ಚಿತ್ರದುರ್ಗವೂ ಒಂದಾಗಿದೆ. ಈಗಾಗಲೇ ಬಾಗಲಕೋಟೆ ರೈಲು ನಿಲ್ದಾಣ ಉದ್ಘಾಟನೆಯಾಗಿದೆ. ಚಿತ್ರದುರ್ಗ ರೈಲು ನಿಲ್ದಾಣದ ಕಾಮಗಾರಿ ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಚಿಕ್ಕಜಾಜೂರಿನಿಂದ ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮುರು, ಬಳ್ಳಾರಿವರೆಗೆ ೧೮೫ ಕಿ.ಮೀ. ರೈಲ್ವೆ ಹಳಿಯನ್ನು ಡಬ್ಲಿಂಗ್ ಮಾಡಲು ನಾಲ್ಕು ವರ್ಷಗಳ ಕಾಲಾವಕಾಶ ನಿಗದಿ ಮಾಡಲಾಗಿದೆ. ಇದಕ್ಕಾಗಿ ೩೪೦೦ ಕೋಟಿ ಅನುದಾನ ನೀಡಲಾಗಿದೆ. ಇದರಿಂದ ಈ ಭಾಗದ ಜನರ ಆರ್ಥಿಕ ಚಟುವಟಿಕೆ, ವ್ಯಾಪಾರ ವಹಿವಾಟು ಹೆಚ್ಚಾಗಲಿದೆ. ರೈತರಿಗೆ ಕೃಷಿ ಉತ್ಪನ್ನಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು ಅನುಕೂಲವಾಗಲಿದೆ. ಮುಖ್ಯವಾಗಿ ಉದ್ಯೋಗಾವಕಾಶ ಹೆಚ್ಚಾಗಲಿದೆ ಎಂದು ತಿಳಿಸಿದರು.
ಪಾವಗಡ – ಮಡಕಶಿರ ಭಾಗದ ರೈಲು ಮಾರ್ಗದ ಅಭಿವೃದ್ಧಿಗೆ ೨೬೫ ಕೋಟಿ ವೆಚ್ಚದಲ್ಲಿ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರ ಆದಷ್ಟು ಬೇಗ ಇದಕ್ಕೆ ಪೂರಕವಾದ ಸೌಲಭ್ಯಗಳನ್ನು ಒದಗಿಸಬೇಕು. ಚಿತ್ರದುರ್ಗದಲ್ಲಿ ಪ್ರತಿದಿನ ೩೦ ಬಾರಿ ರೈಲ್ವೆ ಗೇಟ್ ಬಂದ್ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸಲು ಚಿತ್ರದುರ್ಗ, ಚಿಕ್ಕಜಾಜೂರು ಹಾಗೂ ಹಳಿಯೂರು ಗ್ರಾಮದ ಬಳಿ ರೈಲು ಸೇತುವೆ ನಿರ್ಮಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಇದಕ್ಕೆ ರಾಜ್ಯ ಸರ್ಕಾರ ಶೇಕಡಾ ೫೦ ರಷ್ಟು ಅನುದಾನ ನೀಡಬೇಕಿತ್ತು. ಆದರೆ ಕೇಂದ್ರ ಸರ್ಕಾರವೇ ಶೇಕಡಾ ೧೦೦ ರಷ್ಟು ಅನುದಾನ ನೀಡಿದೆ ಎಂದರು.
ಈ ಮೂರು ಕಡೆಗಳಲ್ಲಿ ರೈಲು ಸೇತುವೆ ನಿರ್ಮಿಸಲು ಸುಮಾರು ನಾಲ್ಕು ಎಕರೆಯಷ್ಟು ಜಾಗದ ಅಗತ್ಯವಿದೆ. ಇದನ್ನು ರಾಜ್ಯ ಸರ್ಕಾರ ಸಾಧ್ಯವಾದಷ್ಟು ಬೇಗ ಸ್ವಾಧೀನ ಮಾಡಿಕೊಡಬೇಕು. ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ರೈಲ್ವೆ ಯೋಜನೆ ಕಾಮಗಾರಿಗಳಿಗೆ ೫೫೦ ಕೋಟಿ ಅನುದಾನ ನೀಡಲಾಗಿದ್ದು, ೨೦೨೭ ರ ಅಂತ್ಯಕ್ಕೆ ಕೊನೆಗೊಳಿಸುವ ಗುರಿ ಹೊಂದಲಾಗಿದೆ. ಒಟ್ಟಾರೆಯಾಗಿ ೫ ಸಾವಿರ ಕೋಟಿಗಿಂತ ಹೆಚ್ಚು ಅನುದಾನ ರೈಲ್ವೆ ಇಲಾಖೆಗೆ ಬಂದಿದ್ದು, ವಿವಿಧೆಡೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಜಿಲ್ಲಾ ಖಜಾಂಚಿ ಮಾಧುರಿ ಗಿರೀಶ್, ಮಾಜಿ ಅಧ್ಯಕ್ಷ ಎ.ಮುರುಳಿ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.