ಹೊಸ ದಿಗಂತ ವರದಿ, ಚಿತ್ರದುರ್ಗ:
ಸೇನೆಯ ಸೇವೆ ರಾಷ್ಟ್ರದ ಸೇವೆ ಎಂಬ ಅಭಿಮಾನದಿಂದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರು ಸೇನೆಗೆ ಸೇರಿ ದೇಶಕ್ಕಾಗಿ ವೀರ ಮರಣವನ್ನಪ್ಪಿದ್ದಾರೆ ಎಂದು ಸರ್ಕಾರಿ ಕಲಾ ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಪ್ಟಿನೆಂಟ್ ಡಾ.ಸ.ರಾ.ಲೇಪಾಕ್ಷ ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿಯಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿರುವ 63 ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರಿಗೆ ನಗರದ ಸರಕಾರಿ ಕಲಾ ಕಾಲೇಜು ಆವರಣದಲ್ಲಿ ಎನ್‌ಸಿಸಿ ಘಟಕದಿಂದ ಶನಿವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕ್ಯಾ.ಎಂ.ವಿ.ಪ್ರಾಂಜಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಮನೆಯಲ್ಲಿ ನಾಲ್ಕೈದು ಮಕ್ಕಳಿದ್ದರೂ ಸೇನೆಗೆ ಸೇರಲು ಹೆದರಿಕೆಯಿಂದ ಹಿಂದೆ ಮುಂದೆ ನೋಡುತ್ತೇವೆ. ಆದರೆ ಪ್ರಾಂಜಲ್ ರವರ ಪೋಷಕರು ಉನ್ನತ ಹುದ್ದೆಯಲ್ಲಿದ್ದರೂ ಸೇನೆಗೆ ಕಳುಹಿಸಿರುತ್ತಾರೆ. ಸೇನೆಗೆ ಹೋಗುವುದು ಹೊಟ್ಟೆಪಾಡಿಗಾಗಿ, ಉದ್ಯೋಗಕ್ಕೆ ಎಂದು ಕೆಲವರು ಮಾತನಾಡುತ್ತಾರೆ. ಆದರೆ ಪ್ರಾಂಜಲ್ ಅವರು ಚಿಕ್ಕ ವಯಸ್ಸಿನಲ್ಲೇ ಸೇನೆ ಅಧಿಕಾರಿಯಾಗಿ 29 ವಯಸ್ಸಿನಲ್ಲಿ ವೀರ ಮರಣವನ್ನಪ್ಪಿದ್ದಾರೆ. ಪ್ರತಿಯೊಬ್ಬರಲ್ಲೂ ನನ್ನ ರಾಷ್ಟ್ರ ಎಂಬ ಅಭಿಮಾನ ಮೂಡಬೇಕು. ದೇಶ ನನ್ನದು ಎಂಬ ಚಿಂತನೆ ಮಾಡಬೇಕು ಎಂದರು.
ಕಾಲೇಜಿನ ಪ್ರಭಾರ ಪ್ರಾಚಾರ್ಯ ಪ್ರೊ.ಎಲ್.ನಾಗರಾಜಪ್ಪ ಮಾತನಾಡಿ, ಎಂತಹ ಸಂದರ್ಭ ಬಂದರೂ ನಮ್ಮ ನಾಡು, ದೇಶ, ಜನತೆಗೆ ರಕ್ಷಣೆಗೆ ನಮ್ಮ ಜೀವನ ಮುಡಿಪಾಗಿಡಬೇಕು. ಹುತಾತ್ಮ ಕ್ಯಾ.ಎಂ.ವಿ.ಪ್ರಾಂಜಲ್ ಅವರಂತೆ ಧೈರ್ಯ ಮೆರೆಯಬೇಕು, ಸಾವಿಗೆ ಅಂಜಿಕೆ, ಭಯ ಪಡಬಾರದು. ಯುವಕರು ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ನ್ಯಾಯವಾದಿ ಓ.ಪ್ರತಾಪ್ ಜೋಗಿ ಮಾತನಾಡಿ, ಕ್ಯಾ.ಪ್ರಾಂಜಲ್ ಅಂತಹ ಸಾವಿರಾರು ಯುವಕರು ಚಿಕ್ಕ ವಯಸ್ಸಿನಲ್ಲಿ ಸೇನೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವುದು ದೇಶ ಹೆಮ್ಮೆ ಪಡುವ ವಿಷಯ. ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸೇನೆಗೆ ಸೇರುವ ಮೂಲಕ ದೇಶ ಸೇವೆಗೆ ಮುಂದಾಗಬೇಕು ಎಂದರು.
ಕ್ಯಾ.ಎಂ.ವಿ.ಪ್ರಾಂಜಲ್ ನಿಧನಕ್ಕೆ ಒಂದು ನಿಮಿಷ ಮೌನಾಚರಿಸಲಾಯಿತು. ಪ್ರಾಧ್ಯಾಪಕರಾದ ಡಾ.ತಾರಿಣಿ ಶುಭದಾಯಿನಿ, ಡಾ.ಪಿ.ಎಸ್.ಗಂಗಾಧರ್, ಐಕ್ಯುಎಸಿ ಸಂಚಾಲಕ ಪ್ರೊ.ಜಿ.ಡಿ.ಸುರೇಶ್, ಪ್ರೊ.ಆರ್.ಗಂಗಾಧರ್, ಪ್ರೊ.ಕೆ.ಎಲ್.ಶ್ರೀನಿವಾಸ್, ಪ್ರೊ.ನಯಾಜ್, ವೆಂಕಟೇಶ್, ಎನ್‌ಸಿಸಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.