ಹೊಸದಿಗಂತ ಕಲಬುರಗಿ:
ಚಿತ್ತಾಪುರ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನಕ್ಕೆ ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ, ಕಲಬುರಗಿ ವಿಭಾಗೀಯ ಹೈಕೋರ್ಟ್ ಪೀಠವು ಇಂದು ಮಹತ್ವದ ವಿಚಾರಣೆ ನಡೆಸಿತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರಿದ್ದ ಪೀಠವು, ಸಮಸ್ಯೆ ಇತ್ಯರ್ಥಕ್ಕಾಗಿ ಮತ್ತೊಂದು ಸಭೆ ನಡೆಸುವಂತೆ ಸೂಚಿಸಿ, ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿದೆ.
ಈ ಮೊದಲು ಜಿಲ್ಲಾಡಳಿತ ಕರೆದಿದ್ದ ಶಾಂತಿ ಸಭೆಯಲ್ಲಿ ಆರ್.ಎಸ್.ಎಸ್ ಪರ ಅರ್ಜಿದಾರರಾದ ರಾಜ ಅಶೋಕ್ ಪಾಟೀಲ್ ಅವರು ಗೈರಾಗಿದ್ದ ಕಾರಣ, ಸಭೆಯಲ್ಲಿ ಯಾವುದೇ ನಿರ್ಣಯ ಸಾಧ್ಯವಾಗಿರಲಿಲ್ಲ. ಇದರಿಂದಾಗಿ, ಕೋರ್ಟ್‌ಗೆ ಸೂಕ್ತ ವರದಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ, ಅರ್ಜಿದಾರರು ಕಡ್ಡಾಯವಾಗಿ ಭಾಗವಹಿಸುವಂತೆ ಸೂಚಿಸಿ, ರಾಜ್ಯದ ಅಡ್ವೊಕೇಟ್ ಜನರಲ್ (ಎಜಿ) ಶಶಿ ಕಿರಣ್ ಶೆಟ್ಟಿ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನವೆಂಬರ್ 5 ರಂದು ಮತ್ತೊಂದು ಸಭೆ ನಡೆಸಲು ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಸಭೆಯ ವರದಿಯನ್ನು ನವೆಂಬರ್ 7ರಂದು ಕೋರ್ಟ್‌ಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಕೋರ್ಟ್‌ನಲ್ಲಿ ಸರ್ಕಾರದ ಪರವಾಗಿ ಎಜಿ ಶಶಿ ಕಿರಣ್ ಶೆಟ್ಟಿ ಅವರು ವಾದ ಮಂಡಿಸಿದರೆ, ಆರ್.ಎಸ್.ಎಸ್ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಂ ಅವರು ಪ್ರತಿವಾದ ಮಂಡಿಸಿದರು. ನವೆಂಬರ್ 5ರ ಸಭೆಯು ಚಿತ್ತಾಪುರ ಪಥಸಂಚಲನದ ಕುರಿತು ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.

