Sunday, January 11, 2026

CINE | ಹತ್ತಾರು ಟೀಕೆಗಳ ನಡುವೆಯೂ ನೂರು ಕೋಟಿ ಲೂಟಿ: ಇದು ಪ್ರಭಾಸ್ ಬ್ರ್ಯಾಂಡ್ ಪವರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಅವರ ಕ್ರೇಜ್ ಹೇಗಿದೆ ಎಂದರೆ, ಸಿನಿಮಾ ಬಗ್ಗೆ ಎಂತಹದ್ದೇ ಪ್ರತಿಕ್ರಿಯೆ ಬರಲಿ, ಬಾಕ್ಸ್ ಆಫೀಸ್‌ನಲ್ಲಿ ಮಾತ್ರ ದಾಖಲೆಗಳು ಉಡೀಸ್ ಆಗುವುದು ಗ್ಯಾರಂಟಿ. ನಿನ್ನೆಯಷ್ಟೇ ಬಿಡುಗಡೆಯಾದ ಅವರ ಬಹುನಿರೀಕ್ಷಿತ ಹಾರರ್-ಕಾಮಿಡಿ ಚಿತ್ರ ‘ದಿ ರಾಜಾ ಸಾಬ್’, ಮೊದಲ ದಿನವೇ ವಿಶ್ವಾದ್ಯಂತ 100 ಕೋಟಿಗೂ ಅಧಿಕ ಗಳಿಕೆ ಮಾಡುವ ಮೂಲಕ ಚಿತ್ರರಂಗವನ್ನೇ ಬೆಚ್ಚಿಬೀಳಿಸಿದೆ.

‘ರಾಜಾ ಸಾಬ್’ ಯಶಸ್ಸಿನೊಂದಿಗೆ ಪ್ರಭಾಸ್ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆಯೊಂದನ್ನು ಮಾಡಿದ್ದಾರೆ. ಮೊದಲ ದಿನವೇ 100 ಕೋಟಿ ರೂ. ಕ್ಲಬ್ ಸೇರಿದ ಸತತ 6ನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ‘ಬಾಹುಬಲಿ 2’ ಚಿತ್ರದಿಂದ ಶುರುವಾದ ಈ ಸಂಪ್ರದಾಯ, ‘ಸಾಹೋ’, ‘ಆದಿಪುರುಷ್’, ‘ಸಲಾರ್’, ‘ಕಲ್ಕಿ 2898 AD’ ಹಾಗೂ ಈಗ ‘ದಿ ರಾಜಾ ಸಾಬ್’ ವರೆಗೂ ಮುಂದುವರಿದಿದೆ. ಭಾರತದ ಮತ್ಯಾವ ಸೂಪರ್ ಸ್ಟಾರ್‌ಗೂ ಇಂತಹ ಸಾಧನೆ ಮಾಡಲು ಸಾಧ್ಯವಾಗಿಲ್ಲ ಎಂಬುದು ವಿಶೇಷ.

ವಿಶೇಷವೆಂದರೆ, ‘ದಿ ರಾಜಾ ಸಾಬ್’ ಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಧಾರಣ ವಿಎಫ್‌ಎಕ್ಸ್ ಮತ್ತು ಹಳೆಯ ಮಾದರಿಯ ಹಾರರ್ ದೃಶ್ಯಗಳ ಬಗ್ಗೆ ಟೀಕೆಗಳು ಕೇಳಿಬಂದಿವೆ. ಈ ಹಿಂದೆ ‘ಸಾಹೋ’ ಮತ್ತು ‘ಆದಿಪುರುಷ್’ ಕೂಡ ನಿರೀಕ್ಷಿತ ಯಶಸ್ಸು ಕಾಣದಿದ್ದರೂ, ಪ್ರಭಾಸ್ ಎಂಬ ಹೆಸರಿಗಾಗಿಯೇ ಭರ್ಜರಿ ಕಲೆಕ್ಷನ್ ಮಾಡಿದ್ದವು. ಈಗ ‘ರಾಜಾ ಸಾಬ್’ ವಿಷಯದಲ್ಲೂ ಅದೇ ಮ್ಯಾಜಿಕ್ ಮರುಕಳಿಸಿದೆ. ಕಥೆಗಿಂತ ಹೆಚ್ಚಾಗಿ ಪ್ರಭಾಸ್ ಅವರ ಮಾರುಕಟ್ಟೆ ಮೌಲ್ಯವೇ ಸಿನಿಮಾವನ್ನು ಗೆಲ್ಲಿಸುತ್ತಿದೆ.

error: Content is protected !!