ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರ್ದೇಶಕ ಮೋಹಿತ್ ಸೂರಿ ಅವರ ಹೊಸ ರೊಮ್ಯಾಂಟಿಕ್ ಡ್ರಾಮಾ ಚಿತ್ರ ಸೈಯಾರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಆರಂಭವನ್ನು ಪಡೆದಿದ್ದು, ಮೊದಲ ದಿನದ ಕಲೆಕ್ಷನ್ ಮೂಲಕ ಎಲ್ಲಾರ ಗಮನ ಸೆಳೆದಿದೆ. ಅಹಾನ್ ಪಾಂಡೆ ಮತ್ತು ಅನೀತಾ ಪಡ್ಡಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಈ ಚಿತ್ರ, ಬಿಡುಗಡೆ ದಿನವೇ ರೂ. 20.50 ಕೋಟಿ ಗಳಿಸಿದ್ದು ಬಾಲಿವುಡ್ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಸ್ಟಾರ್ ಹೀರೋಗಳ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಗುತ್ತಿರುವ ಈ ಸಂದರ್ಭದಲ್ಲಿ, ಹೊಸ ನಟ ಅಹಾನ್ ಪಾಂಡೆಯ ಚಿತ್ರಕ್ಕೆ ಇಷ್ಟೊಂದು ಭರ್ಜರಿ ಓಪನಿಂಗ್ ಸಿಕ್ಕಿರುವುದು ವಿಶೇಷ. ಅಕ್ಷಯ್ ಕುಮಾರ್ ಸೇರಿದಂತೆ ಹಲವು ಹಿರಿಯ ನಟರ ಚಿತ್ರಗಳು ಎರಡಂಕಿ ಕಲೆಕ್ಷನ್ ಕೂಡ ಮಾಡುತ್ತಿಲ್ಲ. ಆದರೆ ಸೈಯಾರ ಇಂಥ ಮಾದರಿ ದಾಖಲೆ ಬರೆದಿರುವುದು ನಿಜಕ್ಕೂ ಅಚ್ಚರಿ.
ಈ ಹಿಂದೆ ಮೋಹಿತ್ ಸೂರಿ ನಿರ್ದೇಶನದಲ್ಲಿ ಬಿಡುಗಡೆಯಾದ ಮರ್ಡರ್ 2 (6.95 ಕೋಟಿ), ಆಶಿಕಿ 2 (6.10 ಕೋಟಿ), ಹಾಫ್ ಗರ್ಲ್‌ಫ್ರೆಂಡ್ (10.30 ಕೋಟಿ) ಮತ್ತು ಏಕ್ ವಿಲನ್ 16 ಕೋಟಿ) ಮೊದಲ ದಿನದ ಗಳಿಕೆಗಳನ್ನು ಹಿಂದಿಕ್ಕಿ, ಸೈಯಾರ ಮೋಹಿತ್ ಸೂರಿಗೆ ಅತಿದೊಡ್ಡ ಓಪನಿಂಗ್ ನೀಡಿರುವ ಚಿತ್ರವಾಯಿತು. ಚಿತ್ರವನ್ನು ನಿರ್ಮಿಸಿರುವುದು ಯಶ್ ರಾಜ್ ಫಿಲ್ಮ್ಸ್.
ಬುಕ್ ಮೈ ಶೋನಲ್ಲಿ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ದೊರಕಿದ್ದು, 12 ಸಾವಿರಕ್ಕೂ ಅಧಿಕ ಜನರು 9.2 ರೇಟಿಂಗ್ ನೀಡಿದ್ದಾರೆ. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರಶಂಸೆಗಳು ಬರುತ್ತಿದ್ದು, ವೀಕ್ಷಕರ ಅಭಿಪ್ರಾಯಗಳೇ ಚಿತ್ರ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಪ್ರದರ್ಶನ ನೀಡಲಿದೆ ಎಂಬ ನಿರೀಕ್ಷೆ ಮೂಡಿಸಿದೆ.
ಅಹಾನ್ ಪಾಂಡೆ ಯಾರು?
ಅಹಾನ್ ಚಿತ್ರರಂಗದ ಹಿನ್ನೆಲೆ ಹೊಂದಿರುವವರು. ಹಿರಿಯ ನಟ ಚಂಕಿ ಪಾಂಡೆ ಸಹೋದರ ಚಿಕ್ಕಿ ಪಾಂಡೆಯ ಮಗನಾದ ಅಹಾನ್, ಬಾಲಿವುಡ್‌ಗೆ ಪ್ರವೇಶಿಸಿರುವುದು ಯಶ್ ರಾಜ್ ಫಿಲ್ಮ್ಸ್ ಮೂಲಕ.