CINE | ‘ಬಾಹುಬಲಿ: ದಿ ಎಪಿಕ್’ ಟೀಸರ್ ಔಟ್: ಇದರಲ್ಲಿ ಅಂತಹ ವಿಶೇಷತೆ ಏನಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗವನ್ನು ಜಗತ್ತಿಗೆ ಪರಿಚಯಿಸಿದ ‘ಬಾಹುಬಲಿ’ ಸಿನಿಮಾ ಮತ್ತೆ ದೊಡ್ಡ ಪರದೆಗೆ ಬರಲು ಸಜ್ಜಾಗಿದೆ. ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಈ ಮಹಾಕಾವ್ಯಾತ್ಮಕ ಚಿತ್ರವು 2015 ಮತ್ತು 2017ರಲ್ಲಿ ಎರಡು ಭಾಗಗಳಾಗಿ ಬಿಡುಗಡೆಯಾಗಿ ದಾಖಲೆ ಮೊತ್ತವನ್ನು ಗಳಿಸಿತ್ತು. ಈಗ ಎರಡೂ ಭಾಗಗಳನ್ನು ಒಂದೇ ಸಿನಿಮಾವನ್ನಾಗಿ ಮರು ಎಡಿಟ್ ಮಾಡಲಾಗಿದ್ದು, ಅದಕ್ಕೆ ‘ಬಾಹುಬಲಿ: ದಿ ಎಪಿಕ್’ ಎಂದು ಹೆಸರಿಡಲಾಗಿದೆ. ಈ ಚಿತ್ರವು ಅಕ್ಟೋಬರ್ 31ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಮರು ಬಿಡುಗಡೆ ಆಗಲಿದೆ.

ಇಂದು (ಆಗಸ್ಟ್ 26) ‘ಬಾಹುಬಲಿ ಮೂವಿ’ ಯೂಟ್ಯೂಬ್ ಚಾನೆಲ್‌ನಲ್ಲಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಒಂದು ನಿಮಿಷ 15 ಸೆಕೆಂಡ್ ಅವಧಿಯ ಈ ಟೀಸರ್‌ನಲ್ಲಿ ಮೊದಲ ಹಾಗೂ ಎರಡನೇ ಭಾಗದ ಪ್ರಮುಖ ದೃಶ್ಯಗಳನ್ನು ಸೇರಿಸಲಾಗಿದ್ದು, ಹೊಸ ಹಿನ್ನೆಲೆ ಸಂಗೀತದೊಂದಿಗೆ ತಾಂತ್ರಿಕವಾಗಿ ಮತ್ತಷ್ಟು ಅಪ್‌ಗ್ರೇಡ್ ಮಾಡಲಾಗಿದೆ. ಟೀಸರ್‌ನಲ್ಲಿ ಕೆಲವು ಹೊಸ ಎಡಿಟ್‌ಗಳು ಮತ್ತು ವಿಶೇಷ ಸೀನ್‌ಗಳು ಸೇರಿರುವುದು ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದೆ.

ಮರು ಬಿಡುಗಡೆಗೆ ತಯಾರಾಗಿರುವ ಈ ಸಿನಿಮಾವನ್ನು IMAX, 4DX, D-BOX ಮತ್ತು EPIQ ತಂತ್ರಜ್ಞಾನಗಳ ಸಹಾಯದಿಂದ ಮತ್ತಷ್ಟು ಆಕರ್ಷಕವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಡಾಲ್ಬಿ ಸೌಂಡ್ ತಂತ್ರಜ್ಞಾನ ಅಳವಡಿಸಿರುವುದರಿಂದ ಧ್ವನಿ ಗುಣಮಟ್ಟ ಮತ್ತು ದೃಶ್ಯ ಅನುಭವ ಎರಡೂ ಹೆಚ್ಚು ಆಕರ್ಷಕವಾಗಲಿದೆ.

2015ರಲ್ಲಿ ಬಿಡುಗಡೆಯಾದ ಮೊದಲ ಭಾಗವು ಸುಮಾರು 700 ಕೋಟಿ ರೂ.ಗಳಿಗೂ ಹೆಚ್ಚು ಕಲೆ ಹಾಕಿತ್ತು. ನಂತರ 2017ರಲ್ಲಿ ಬಿಡುಗಡೆಯಾದ ಎರಡನೇ ಭಾಗ ‘ಬಾಹುಬಲಿ 2’ 2000 ಕೋಟಿಗೂ ಅಧಿಕ ಗಳಿಕೆ ಮಾಡಿ ಭಾರತೀಯ ಸಿನಿಮಾ ಇತಿಹಾಸದ ದೊಡ್ಡ ದಾಖಲೆ ಬರೆದಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!