Tuesday, January 13, 2026
Tuesday, January 13, 2026
spot_img

CINE | ‘ಮನ ಶಂಕರ ವರ ಪ್ರಸಾದ್ ಗಾರು’ ಮೂಲಕ ಚಿರಂಜೀವಿ ಭರ್ಜರಿ ಕಂಬ್ಯಾಕ್: ಫಸ್ಟ್ ಡೇ ಕಲೆಕ್ಷನ್ ಎಷ್ಟು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿಗೆ ಕೊನೆಗೂ ಬಹುಕಾಲದ ನಂತರ ಸಿಹಿ ಸುದ್ದಿ ಸಿಕ್ಕಿದೆ. ರಾಜಕೀಯದಿಂದ ದೂರ ಸರಿದು ಮತ್ತೆ ಸಿನಿಮಾಗೆ ಸಂಪೂರ್ಣವಾಗಿ ತೊಡಗಿಸಿಕೊಂಡರೂ, ಕಳೆದ ಕೆಲವು ವರ್ಷಗಳಲ್ಲಿ ನಿರೀಕ್ಷಿತ ಯಶಸ್ಸು ಅವರ ಕೈ ಸೇರಿರಲಿಲ್ಲ. 2019ರ ನಂತರ ನಟಿಸಿದ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ನಿರಾಶೆ ಮೂಡಿಸಿದ್ದವು. ಆದರೆ ಇದೀಗ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾದ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಚಿರಂಜೀವಿಯ ವೃತ್ತಿಜೀವನಕ್ಕೆ ಹೊಸ ಉಸಿರು ತುಂಬಿದೆ.

ಅನಿಲ್ ರವಿಪುಡಿ ನಿರ್ದೇಶನದ ಈ ಪಕ್ಕಾ ಎಂಟರ್‌ಟೈನರ್ ಜನವರಿ 12ರಂದು ತೆರೆಕಂಡಿದ್ದು, ಮೊದಲ ದಿನವೇ ಭರ್ಜರಿ ಕಲೆಕ್ಷನ್ ದಾಖಲಿಸಿದೆ. ಬಿಡುಗಡೆಗೂ ಮುನ್ನದ ಅಡ್ವಾನ್ಸ್ ಬುಕ್ಕಿಂಗ್‌ನಲ್ಲೇ 10–12 ಕೋಟಿ ರೂ. ಗಳಿಸಿದ್ದ ಸಿನಿಮಾ, ಮೊದಲ ದಿನ ಭಾರತದಲ್ಲಿ ಸುಮಾರು 38 ಕೋಟಿ ರೂ. ಆದಾಯ ಪಡೆದುಕೊಂಡಿದೆ. ವಿದೇಶಗಳಲ್ಲಿ, ವಿಶೇಷವಾಗಿ ಉತ್ತರ ಅಮೆರಿಕದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಒಟ್ಟಾರೆ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ 55 ಕೋಟಿ ರೂ. ದಾಟಿದೆ ಎನ್ನಲಾಗಿದೆ.

ಹಿಂದಿನ ‘ಭೋಲಾ ಶಂಕರ್’ ಚಿತ್ರದ ಒಟ್ಟು ಕಲೆಕ್ಷನ್‌ನ್ನೇ ಮೊದಲ ದಿನದಲ್ಲೇ ಮೀರಿಸಿರುವುದು ಈ ಸಿನಿಮಾದ ದೊಡ್ಡ ಸಾಧನೆ. ಈ ಸಿನಿಮಾದಲ್ಲಿ ಸಂಪೂರ್ಣ ಹಾಸ್ಯ ಮತ್ತು ಮನರಂಜನೆಗೆ ಒತ್ತು ನೀಡಿರುವುದು ಪ್ರೇಕ್ಷಕರಿಗೆ ಇಷ್ಟವಾಗಿದೆ. ಚಿರಂಜೀವಿಯೇ ಹಾಸ್ಯ ದೃಶ್ಯಗಳಲ್ಲಿ ಮಿಂಚಿರುವುದು ಪ್ರಮುಖ ಪ್ಲಸ್ ಆಗಿದೆ.

ವಿಕ್ಟರಿ ವೆಂಕಟೇಶ್, ನಯನತಾರಾ ಮತ್ತು ಕ್ಯಾತರೀನ್ ಥೆರೇಸಾ ಅಭಿನಯವೂ ಸಿನಿಮಾಕ್ಕೆ ಬಲ ನೀಡಿದ್ದು, ಸಂಕ್ರಾಂತಿಗೆ ಮತ್ತೊಂದು ಹಿಟ್ ನೀಡುವಲ್ಲಿ ಅನಿಲ್ ರವಿಪುಡಿ ಮತ್ತೊಮ್ಮೆ ಯಶಸ್ವಿಯಾಗಿದ್ದಾರೆ.

Most Read

error: Content is protected !!