ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರೇಜಿ ಸ್ಟಾರ್ ರವಿಚಂದ್ರನ್ ಎಂದ ಕೂಡಲೇ ನೆನಪಾಗೋದು ಪ್ರೇಮಲೋಕ ಚಿತ್ರ. ಈ ಚಿತ್ರ ಒಂದಲ್ಲ ಎರಡಕ್ಕಿಂತ ಹೆಚ್ಚು ದಾಖಲೆಗಳನ್ನು ಮಾಡಿದೆ. ಇಂದಿಗೂ ಪ್ರೇಮಲೋಕ ಎವರ್ ಗ್ರೀನ್ ಚಿತ್ರಗಳಲ್ಲಿ ಒಂದಾಗಿ ಉಳಿದಿದೆ. ಈ ಚಿತ್ರದ ಎರಡನೇ ಭಾಗ ಪ್ರೇಮಲೋಕ 2 ನಿರ್ಮಾಣದ ಬಗ್ಗೆ ರವಿಚಂದ್ರನ್ ಇದೀಗ ಮಾತನಾಡಿದ್ದಾರೆ.
ಹಂಪಿ ಉತ್ಸವಕ್ಕೆ ಅತಿಥಿಯಾಗಿ ಆಗಮಿಸಿದ್ದ ರವಿಚಂದ್ರನ್ ಪ್ರೇಮಲೋಕ 2 ಚಿತ್ರದ ತಮ್ಮ ಕನಸನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.ಚಿತ್ರದಲ್ಲಿ 25 ಹಾಡುಗಳಿರುತ್ತವೆ ಎಂದು ಅಚ್ಚರಿಯ ಘೋಷಣೆಯನ್ನೂ ಮಾಡಿದ್ದಾರೆ. 25 ಹಾಡುಗಳಿರುತ್ತವೆ ಎನ್ನುವ ಮಾತು ಕೇಳುತ್ತಿದ್ದಂತೆಯೇ ಸ್ವತಃ ಸಚಿವರಾದ ಜಮೀರ್ ಅಚ್ಚರಿ ವ್ಯಕ್ತ ಪಡಿಸಿದರು.
ಹೌದು, ಪ್ರೇಮಲೋಕ ಚಿತ್ರದ ಹಲವು ಹಾಡುಗಳು ಹಿಟ್ ಆದವು. ಈಗಲೂ ಈ ಹಾಡುಗಳು ಟ್ರೆಂಡಿಂಗ್ ಆಗಿವೆ. ಪ್ರೇಮಲೋಕ 2ಗೆ ರವಿಚಂದ್ರನ್ ಅಂತಹ ಇನ್ನಷ್ಟು ಹಾಡುಗಳನ್ನು ರಚಿಸಲು ಮುಂದಾಗಿದ್ದಾರೆ. ಈ ಹಾಡುಗಳು ಕಥೆಯ ರೂಪದಲ್ಲೂ ಬರಲಿವೆ ಎನ್ನುವುದು ವಿಶೇಷ.
ರವಿಚಂದ್ರನ್ ಸಿನಿಮಾ ಮಾಡುವ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಅದು ಯಾವಾಗ ಪ್ರಾರಂಭವಾಗುತ್ತದೆ? ಈ ಕಥೆ ಏನು? ಕಲಾವಿದರು ಯಾರು ಎಂಬ ಬಗ್ಗೆ ಅವರು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.