ಹೊಸದಿಗಂತ ಡಿಜಿಟಲ್ ಡೆಸ್ಕ್:
ಭರ್ಜರಿ ಆರಂಭ ಕಂಡಿದ್ದ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ನಿಧಾನವಾಗಿ ವೇಗ ಕಳೆದುಕೊಳ್ಳುತ್ತಿದೆ. ಬಿಡುಗಡೆಯ ಮೊದಲ ದಿನ ದಾಖಲೆ ಮಟ್ಟದ ಓಪನಿಂಗ್ ಪಡೆದಿದ್ದ ಚಿತ್ರಕ್ಕೆ, ದಿನಗಳು ಸಾಗಿದಂತೆ ಪ್ರೇಕ್ಷಕರ ಸ್ಪಂದನೆ ಕಡಿಮೆಯಾಗುತ್ತಿರುವುದು ಸಂಗ್ರಹ ಅಂಕಿಅಂಶಗಳಿಂದ ಸ್ಪಷ್ಟವಾಗಿದೆ. ಹೆಚ್ಚಿನ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಪ್ರಸ್ತುತ ಗಳಿಕೆ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂಬುದು ನಿರ್ಮಾಪಕರಿಗೆ ಆತಂಕ ತಂದಿದೆ.
ರಿಲೀಸ್ ಆಗಿ ಎಂಟು ದಿನಗಳನ್ನು ಪೂರೈಸಿರುವ ‘ಡೆವಿಲ್’, ಇದುವರೆಗೆ ಸುಮಾರು 25 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿಗಳು ತಿಳಿಸಿದೆ. ಆದರೆ ಗುರುವಾರದ ದಿನದ ಸಂಗ್ರಹ ಕೇವಲ 53 ಲಕ್ಷ ರೂಪಾಯಿಗೆ ಸೀಮಿತವಾಗಿರುವುದು ಚಿತ್ರ ತಂಡಕ್ಕೆ ದೊಡ್ಡ ಶಾಕ್ ಆಗಿದೆ. ಮೊದಲ ವಾರಾಂತ್ಯದ ನಂತರ ಚಿತ್ರ ಹಂತ ಹಂತವಾಗಿ ಪ್ರೇಕ್ಷಕರನ್ನು ಕಳೆದುಕೊಳ್ಳುತ್ತಿದೆ ಎಂಬ ಅಭಿಪ್ರಾಯ ಬಲವಾಗುತ್ತಿದೆ.
ದರ್ಶನ್ ಜೈಲಿನಲ್ಲಿ ಇರುವ ಸಂದರ್ಭದಲ್ಲೇ ಸಿನಿಮಾ ಬಿಡುಗಡೆಯಾಗಿದ್ದು, ಪ್ರಚಾರದ ಹೊಣೆಗಾರಿಕೆಯನ್ನು ಅಭಿಮಾನಿಗಳು ತಮ್ಮ ಮೇಲೇ ತೆಗೆದುಕೊಂಡಿದ್ದರು. ಆದರೂ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ‘ಡೆವಿಲ್’ಗೆ ಮಿಶ್ರ ಪ್ರತಿಕ್ರಿಯೆ ದೊರೆತಿರುವುದು ಬಾಕ್ಸ್‌ಆಫೀಸ್ ಮೇಲೆ ಪರಿಣಾಮ ಬೀರಿದೆ. ಇದೀಗ ಶನಿವಾರ ಮತ್ತು ಭಾನುವಾರದ ಕಲೆಕ್ಷನ್ ಚಿತ್ರದ ಮುಂದಿನ ದಿಕ್ಕು ನಿರ್ಧರಿಸಲಿದೆ.

