ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ದೊಡ್ಡ ಸಿನಿಮಾಗಳು ತೆರೆಕಾಣುತ್ತಿರುವುದು ಪ್ರೇಕ್ಷಕರಿಗೆ ಹಬ್ಬದಂತಾಗಿದೆ. ಸದ್ಯ ಶಿವರಾಜ್‌ಕುಮಾರ್ ಅಭಿನಯದ ’45’ ಹಾಗೂ ಸುದೀಪ್ ಅವರ ‘ಮಾರ್ಕ್’ ಚಿತ್ರಗಳು ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಿವೆ. ಇಷ್ಟೆಲ್ಲಾ ಪೈಪೋಟಿಯ ನಡುವೆಯೂ ಡಿಸೆಂಬರ್ 11ರಂದು ತೆರೆಕಂಡ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ತನ್ನ ಓಟವನ್ನು ಮುಂದುವರಿಸಿದೆ.
ಎರಡು ವಾರಗಳನ್ನು ಯಶಸ್ವಿಯಾಗಿ ಪೂರೈಸಿರುವ ‘ಡೆವಿಲ್’, 15ನೇ ದಿನವಾದ ಗುರುವಾರ ಸುಮಾರು 24 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಹೊಸ ಸಿನಿಮಾಗಳ ಆಗಮನದಿಂದ ಶೋಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದರೂ ಸಹ, ಸಿಂಗಲ್ ಸ್ಕ್ರೀನ್‌ಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವು ಕಡೆಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವುದು ಚಿತ್ರತಂಡಕ್ಕೆ ಆನೆಬಲ ತಂದಿದೆ.
ವರದಿಗಳ ಪ್ರಕಾರ, ಈವರೆಗೂ ‘ಡೆವಿಲ್’ ಚಿತ್ರದ ಒಟ್ಟು ಗ್ರಾಸ್ ಕಲೆಕ್ಷನ್ ಸುಮಾರು 33.83 ಕೋಟಿ ರೂಪಾಯಿ ದಾಟಿದೆ. ನಟ ದರ್ಶನ್ ಜೈಲಿನಲ್ಲಿರುವಾಗಲೇ ಸಿನಿಮಾ ಬಿಡುಗಡೆಯಾಗಿದ್ದರೂ, ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಕ್ಕೆ ಬಂದು ಬೆಂಬಲ ಸೂಚಿಸಿದ್ದಾರೆ.
ಮಿಲನ ಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಆ್ಯಕ್ಷನ್ ಸಿನಿಮಾವನ್ನು ವೈಷ್ಣೋ ಸ್ಟುಡಿಯೋ ಹಾಗೂ ಜೈ ಮಾತಾ ಕಂಬೈನ್ಸ್ ನಿರ್ಮಿಸಿವೆ. ಚಿತ್ರದಲ್ಲಿ ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಶರ್ಮಿಳಾ ಮಾಂಡ್ರೆ ಹಾಗೂ ರಚನಾ ರೈ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

