ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಇತಿಹಾಸದಲ್ಲಿನ ಮಹತ್ವದ ಹೋರಾಟವಾದ ಹಲಗಲಿ ಬೇಡರ ಸಶಸ್ತ್ರ ದಂಗೆ ಇದೀಗ ಚಿತ್ರ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಸ್ವಾತಂತ್ರ್ಯ ಹೋರಾಟದ ಪುಟಗಳಲ್ಲಿ ಸ್ಥಾನ ಪಡೆದ ಈ ಕಥೆಯ ಫಸ್ಟ್ ಲುಕ್ ಟೀಸರ್ ಇಂದು (ಆಗಸ್ಟ್ 15) ಬಿಡುಗಡೆಯಾಗಿ ಜನರ ಗಮನ ಸೆಳೆಯುತ್ತಿದೆ. ನಟ ಡಾಲಿ ಧನಂಜಯ್, ಹಲಗಲಿ ಬೇಡರ ನಾಯಕ ಜಡಗಣನ ಪಾತ್ರದಲ್ಲಿ ತೀವ್ರ ಹೋರಾಟಗಾರನ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ.
ದುಹಾರಾ ಮೂವೀಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ ಟೀಸರ್‌ನಲ್ಲಿ ಬುಡಕಟ್ಟು ಸಮುದಾಯದವರು ಕೈಯಲ್ಲಿ ಭರ್ಜಿ, ಕೊಡಲಿ, ಮಚ್ಚು, ಬಿಲ್ಲು-ಬಾಣಗಳನ್ನು ಹಿಡಿದು ಬ್ರಿಟೀಷರ ಆಡಳಿತ ಕೇಂದ್ರದ ಕಡೆಗೆ ದಾಳಿ ನಡೆಸುತ್ತಿರುವ ದೃಶ್ಯಗಳು ಕಂಗೊಳಿಸುತ್ತವೆ. ವಿಶೇಷವಾಗಿ ಜಡಗಣ ಬಾವುಟವನ್ನು ನೆಲಕ್ಕುರುಳಿಸುವ ಕ್ಷಣವು ಟೀಸರ್‌ನ ಪ್ರಮುಖ ಆಕರ್ಷಣೆಯಾಗಿದೆ.
1857ರ ಮೊದಲ ಸ್ವಾತಂತ್ರ್ಯ ಹೋರಾಟದ ನಂತರ ಬ್ರಿಟೀಷರು ಜಾರಿಗೊಳಿಸಿದ ನಿಶಸ್ತ್ರೀಕರಣ ಕಾಯ್ದೆಗೆ ಹಲಗಲಿ ಬೇಡರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರು. ಆಯುಧಗಳನ್ನು ಬದುಕಿನ ಅವಿಭಾಜ್ಯ ಅಂಗವೆಂದು ನಂಬಿದ ಅವರು ಬ್ರಿಟೀಷರಿಗೆ ಶರಣಾಗದೆ, ಅದೇ ಆಯುಧಗಳನ್ನು ಬಳಸಿ ಹೋರಾಟ ನಡೆಸಿದರು. ಇದೇ ಘಟನೆ ಆಧಾರವಾಗಿ ಈ ಚಿತ್ರ ಮೂಡಿ ಬಂದಿದೆ.
ಚಿತ್ರವನ್ನು ಸುಕೇಶ್ ನಾಯಕ್ ನಿರ್ದೇಶಿಸುತ್ತಿದ್ದು, ಕಲ್ಯಾಣ್ ಚಕ್ರವರ್ತಿ ಡಿ ನಿರ್ಮಾಣ ಮಾಡುತ್ತಿದ್ದಾರೆ. ಯರಲಗಡ್ಡ ಲಕ್ಷ್ಮಿ ಶ್ರೀನಿವಾಸ್ ಸಹ-ನಿರ್ಮಾಪಕರಾಗಿದ್ದಾರೆ. ವಾಸುಕಿ ವೈಭವ್ ಸಂಗೀತ, ಶಿವೇಂದರ್ ಸಾಯಿ ಶ್ರೀರಾಮ್ ಛಾಯಾಗ್ರಹಣ, ರಾಮಾಂಜನೇಯಲು ಕಲಾ ನಿರ್ದೇಶನ ವಹಿಸಿಕೊಂಡಿದ್ದಾರೆ. ನಟವರ್ಗದಲ್ಲಿ ಸಪ್ತಮಿ ಗೌಡ, ಬಿ. ಸುರೇಶ್, ಶರತ್ ಲೋಹಿತಾಶ್ವ, ಬಿರಾದರ್, ವೀಣಾ ಸುಂದರ್ ಸೇರಿದಂತೆ ಹಲವರು ಸೇರಿದ್ದಾರೆ.
ಹಲಗಲಿ ಬೇಡರ ಹೋರಾಟದ ಕಥೆ ಕನ್ನಡ ಚಿತ್ರರಂಗಕ್ಕೆ ಹೊಸ ಇತಿಹಾಸ ಆಧಾರಿತ ಚಿತ್ರವನ್ನು ನೀಡುತ್ತಿದೆ. ಜನಾಂಗದ ಧೈರ್ಯ, ತ್ಯಾಗ ಮತ್ತು ಸ್ವಾತಂತ್ರ್ಯದ ಕತೆ ಬೆಳ್ಳಿತೆರೆಯ ಮೇಲೆ ಮೂಡಿ ಬರುತ್ತಿದ್ದು, ಡಾಲಿ ಧನಂಜಯ್ ಅವರ ತೀವ್ರ ಅಭಿನಯ ಈ ಕಥೆಗೆ ಹೆಚ್ಚುವರಿ ಬಲ ನೀಡುವ ನಿರೀಕ್ಷೆಯಿದೆ.