ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ ಬಿ. ಶೆಟ್ಟಿ ನಿರ್ಮಾಣ ಮತ್ತು ಜೆಪಿ ತುಮಿನಾಡ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಸು ಫ್ರಮ್ ಸೋ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಎರಡನೇ ವಾರದ ಮೊದಲ ದಿನವಾದ ಸೋಮವಾರದ ಗಳಿಕೆಯಿಂದ ಮತ್ತೊಮ್ಮೆ ಸುದ್ದಿಯಲ್ಲಿದೆ. ಆಗಸ್ಟ್ 4ರಂದು ಚಿತ್ರವು ಸುಮಾರು 3.50 ಕೋಟಿ ಕಲೆಕ್ಷನ್ ಮಾಡಿ, ಒಟ್ಟು ಕಲೆಕ್ಷನ್ 40 ಕೋಟಿ ಗಡಿ ದಾಟಿದೆ ಎಂಬ ಮಾಹಿತಿ ದೊರೆತಿದೆ.
ಸಣ್ಣ ಬಜೆಟ್‌ನಲ್ಲಿ ತಯಾರಾಗಿದ್ದರೂ ಈ ಮಟ್ಟದ ಯಶಸ್ಸು ಪಡೆದಿರುವುದು ಸಿನಿಮಾ ಪ್ರೇಮಿಗಳಿಗೂ, ನಿರ್ಮಾಪಕರಿಗೂ ಖುಷಿಯ ವಿಷಯವಾಗಿದೆ. ವಾರದ ದಿನಗಳಲ್ಲಿಯೂ ಚಿತ್ರವು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ಇದು ಸಿನಿಮಾ ಪ್ರಯಾಣಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ.
ಚಿತ್ರದ ಟ್ರೇಲರ್ ಬಿಡುಗಡೆಯಾಗಿದಾಗಿನಿಂದಲೂ ‘ಸು ಫ್ರಮ್ ಸೋ’ ಬಗ್ಗೆ ಜನರ ಕನಿಷ್ಠ ನಿರೀಕ್ಷೆ ಏರಿಕೆಯಾಗಿತ್ತು. ಪ್ರೀಮಿಯರ್ ಶೋಗಳ ಮೂಲಕ ಸಿನಿಮಾಗೆ ಉತ್ತಮ ಹೈಪ್ ಸಿಕ್ಕಿದ್ದು, ಮಲಯಾಳಂ ಭಾಷೆಯ ಪ್ರೇಕ್ಷಕರಿಂದಲೂ ಚಿತ್ರ ಮೆಚ್ಚುಗೆ ಪಡೆದುಕೊಂಡಿದೆ. ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೆ, ಇತರ ದೇಶಗಳಲ್ಲಿಯೂ ಚಿತ್ರ ಪ್ರದರ್ಶನ ಕಂಡು ಜನಪ್ರಿಯತೆ ಪಡೆದಿರುವುದು ಈ ಚಿತ್ರದ ವ್ಯಾಪ್ತಿಯ ಪ್ರಮಾಣವನ್ನೇ ತೋರಿಸುತ್ತದೆ.
ಇನ್ನು ಚಿತ್ರವು ಈಗ ತೆಲುಗಿನಲ್ಲಿಯೂ ಬಿಡುಗಡೆಯಾಗಲು ಸಿದ್ಧವಾಗಿದೆ. ‘ಪುಷ್ಪ’ ಸಿನಿಮಾವನ್ನು ನಿರ್ಮಿಸಿದ ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ ತೆಲುಗು ವಿತರಣೆಗೆ ಮುಂದಾಗಿದೆ. ಆಗಸ್ಟ್ 8ರಂದು ತೆಲುಗು ಭಾಷೆಯಲ್ಲೂ ಚಿತ್ರ ತೆರೆಗೆ ಬರಲಿದೆ.
ಇಂತಹ ವೇಗದ ಪ್ರದರ್ಶನ ಮುಂದುವರೆದರೆ, ‘ಸು ಫ್ರಮ್ ಸೋ’ ಚಿತ್ರ 100 ಕೋಟಿ ಕ್ಲಬ್ ಸೇರುವ ಸಾಧ್ಯತೆ ಬಹಳವೇ ಜಾಸ್ತಿಯಾಗಿದೆ. ಇದು ಕನ್ನಡ ಚಿತ್ರರಂಗದ ಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಒಯ್ಯುವ ಸಾಧನೆಯಾಗಬಹುದು.