ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಸಿನಿಮಾ ವಲಯದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎನಿಸಿಕೊಂಡಿರುವ ಆಸ್ಕರ್ ಪ್ರಶಸ್ತಿಗೆ ಈ ಬಾರಿ ಭಾರತದಿಂದ ‘ಹೋಮ್‌ಬೌಂಡ್’ ಸಿನಿಮಾವನ್ನು ಕಳಿಸಲಾಗಿದೆ. ವಿದೇಶಿ ಭಾಷಾ ಸಿನಿಮಾ ವಿಭಾಗದಲ್ಲಿ ಸ್ಪರ್ಧಿಸಿರುವ ಈ ಚಿತ್ರ, ಆಸ್ಕರ್‌ನ ಅಂತಿಮ 15 ಸಿನಿಮಾಗಳ ಶಾರ್ಟ್‌ಲಿಸ್ಟ್‌ಗೆ ಸೇರಿಕೊಂಡಿದ್ದು, ಭಾರತೀಯ ಸಿನಿಪ್ರೇಕ್ಷಕರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಇಶಾನ್ ಖಟ್ಟರ್, ವಿಶಾಲ್ ಜೇಟ್ವ ಮತ್ತು ಜಾನ್ಹವಿ ಕಪೂರ್ ಅಭಿನಯದ ‘ಹೋಮ್‌ಬೌಂಡ್’ ಸಿನಿಮಾ, ಭಾರತದ ಜಾತಿ ವ್ಯವಸ್ಥೆ ಮತ್ತು ಧಾರ್ಮಿಕ ವೈರುಧ್ಯಗಳಂತಹ ಸೂಕ್ಷ್ಮ ಸಾಮಾಜಿಕ ವಿಚಾರಗಳನ್ನು ಕಥಾಹಂದರವಾಗಿ ಹೊಂದಿದೆ. ಈಗಾಗಲೇ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ಈ ಚಿತ್ರ, ವಿಮರ್ಶಕರಿಂದ ಪ್ರಶಂಸೆ ಪಡೆದುಕೊಂಡಿತ್ತು. ಅದರ ಮುಂದುವರಿದ ಪರಿಣಾಮವಾಗಿ ಇದೀಗ ಆಸ್ಕರ್ ರೇಸ್‌ನಲ್ಲೂ ಗಮನ ಸೆಳೆದಿದೆ.
ಆಸ್ಕರ್ ಅಕಾಡೆಮಿಯ ಎಲ್ಲ ವಿಭಾಗದ ಸದಸ್ಯರು ಶಾರ್ಟ್‌ಲಿಸ್ಟ್ ಆಗಿರುವ 15 ಸಿನಿಮಾಗಳನ್ನು ವೀಕ್ಷಿಸಿ ಮತ ಚಲಾಯಿಸಲಿದ್ದು, ಅದರಿಂದ ಅಂತಿಮ ಐದು ನಾಮಿನೇಟೆಡ್ ಸಿನಿಮಾಗಳು ಆಯ್ಕೆಯಾಗಲಿವೆ. ಆ ಐದರಲ್ಲಿ ಒಂದೇ ಸಿನಿಮಾ ಪ್ರಶಸ್ತಿಗೆ ಭಾಜನವಾಗಲಿದೆ. ಆದರೆ ಇರಾಖ್‌ನ ‘ದಿ ಪ್ರೆಸಿಡೆಂಟ್ ಕೇಕ್’, ಪ್ಯಾಲೆಸ್ತೇನ್‌ನ ‘ಪ್ಯಾಲೆಸ್ತೇನ್ 36’ ಹಾಗೂ ದಕ್ಷಿಣ ಕೊರಿಯಾದ ‘ನೋ ಅದರ್ ಚಾಯ್ಸ್’ ಸೇರಿದಂತೆ ಪ್ರಬಲ ಸ್ಪರ್ಧಿಗಳು ‘ಹೋಮ್‌ಬೌಂಡ್’ ಎದುರು ನಿಂತಿವೆ.
ಇದರೊಂದಿಗೆ ಆಸ್ಕರ್ ಕ್ಯಾಂಪೇನ್ ವಿಚಾರವೂ ಪ್ರಮುಖವಾಗಿದೆ. ಸುಮಾರು 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಸಿನಿಮಾಗೆ, ಅಂತಾರಾಷ್ಟ್ರೀಯ ಮಟ್ಟದ ಪ್ರಚಾರಕ್ಕಾಗಿ ಇನ್ನಷ್ಟು ದೊಡ್ಡ ಮೊತ್ತದ ಹೂಡಿಕೆ ಅಗತ್ಯವಿದೆ. ನಿರ್ಮಾಪಕರು ಈ ದಿಕ್ಕಿನಲ್ಲಿ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದೇ ಮುಂದಿನ ಹಂತದಲ್ಲಿ ಚಿತ್ರದ ಭವಿಷ್ಯವನ್ನು ನಿರ್ಧರಿಸಲಿದೆ.

