ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆಯಾದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ. ಇದೀಗ ಟೀಸರ್‌ನಲ್ಲಿ ಕಾಣಿಸಿಕೊಂಡಿದ್ದ ವಿದೇಶಿ ನಟಿಯೊಬ್ಬರು ಸೋಷಿಯಲ್ ಮೀಡಿಯಾ ಟ್ರೋಲ್ ಹಾಗೂ ಟೀಕೆಗಳಿಗೆ ಬೇಸತ್ತು ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನೇ ತಾತ್ಕಾಲಿಕವಾಗಿ ಡಿಲೀಟ್ ಮಾಡಿದ್ದಾರೆ.
ಟೀಸರ್‌ನಲ್ಲಿ ಕಾರಿನೊಳಗೆ ಬೋಲ್ಡ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ನಟಿ ಮೊದಲು ಹಾಲಿವುಡ್‌ನ ನಟೇಲಿ ಬರ್ನ್ ಎಂದು ಭಾವಿಸಲಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ನಿರ್ದೇಶಕಿ ಗೀತು ಮೋಹನ್ ದಾಸ್, ಅವರು ನಟೇಲಿ ಬರ್ನ್ ಅಲ್ಲ, ಬದಲಿಗೆ ಬಿಯಾತ್ರೀಜ್ ಟಾಫೆಬಾಕ್ ಎಂದು ಬಹಿರಂಗಪಡಿಸಿದ್ದರು.
ನಿರ್ದೇಶಕರು ನಟಿಯ ಹೆಸರು ಬಹಿರಂಗಪಡಿಸುತ್ತಿದ್ದಂತೆಯೇ, ಬಿಯಾತ್ರೀಜ್ ಅವರ ಇನ್ಸ್ಟಾಗ್ರಾಮ್ ಖಾತೆಗೆ ಕನ್ನಡಿಗರಿಂದ ಸಾವಿರಾರು ಸಂದೇಶಗಳು ಹರಿದುಬಂದಿವೆ. ಈ ಪೈಕಿ ಹೆಚ್ಚಿನವು ಅವರ ಬೋಲ್ಡ್ ನಟನೆಯನ್ನು ಟೀಕಿಸುವ ‘ಹೇಟ್ ಮೆಸೇಜ್’ಗಳಾಗಿದ್ದವು ಎನ್ನಲಾಗಿದೆ. ಹಾಲಿವುಡ್ ಸಿನಿಮಾಗಳಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾದರೂ, ಕನ್ನಡದ ಸಿನಿಮಾವೊಂದರಲ್ಲಿ ಈ ಮಟ್ಟದ ಬೋಲ್ಡ್‌ನೆಸ್ ಕಂಡ ನೆಟ್ಟಿಗರು ನಟಿಯನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ.
ಒಂದೆಡೆ ಅಪಾರ ಸಂಖ್ಯೆಯ ಫಾಲೋ ರಿಕ್ವೆಸ್ಟ್‌ಗಳು ಹಾಗೂ ಇನ್ನೊಂದೆಡೆ ಸತತವಾಗಿ ಬರುತ್ತಿದ್ದ ನೆಗೆಟಿವ್ ಕಾಮೆಂಟ್‌ಗಳಿಂದ ಬೇಸತ್ತ ಬಿಯಾತ್ರೀಜ್ ಟಾಫೆಬಾಕ್, ಸದ್ಯಕ್ಕೆ ಸಾಮಾಜಿಕ ಜಾಲತಾಣದಿಂದ ದೂರವಿರಲು ನಿರ್ಧರಿಸಿದ್ದಾರೆ. ಹೀಗಾಗಿ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯನ್ನು ತಾತ್ಕಾಲಿಕವಾಗಿ ಡಿಲೀಟ್ ಮಾಡಿದ್ದಾರೆ.


