ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್‌ನ ‘ರಾಕಿಂಗ್ ಸ್ಟಾರ್’ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಟೀಸರ್ ಈಗ ಇಡೀ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಇದುವರೆಗಿನ ಸಿನಿಮೀಯ ಚೌಕಟ್ಟುಗಳನ್ನು ಮೀರಿ ನಿಂತಿರುವ ಈ ಟೀಸರ್, ಮಡಿವಂತಿಕೆಯ ಕೊಂಡಿಗಳನ್ನು ಕಡಿದು ಹಾಕುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಟೀಸರ್‌ನಲ್ಲಿರುವ ಬೋಲ್ಡ್ ದೃಶ್ಯಗಳು ಮತ್ತು ಯಶ್ ಅವರ ರಗಡ್ ಲುಕ್ ಕಂಡು ಒಂದಷ್ಟು ಜನ ಹುಬ್ಬೇರಿಸಿದ್ದರೆ, ಸಿನಿರಸಿಕರು ಮಾತ್ರ ಯಶ್ ಅವರ ಈ ದಿಟ್ಟ ಹೆಜ್ಜೆಗೆ ಫಿದಾ ಆಗಿದ್ದಾರೆ. ಸಿನಿಮಾ ಕ್ಷೇತ್ರದ ಗಣ್ಯರು ಕೂಡ ಯಶ್ ಅವರ ಈ ಹೊಸ ಪ್ರಯೋಗವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.
ವಿಶೇಷವಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ‘ಟಾಕ್ಸಿಕ್’ ಟೀಸರ್ ನೋಡಿ ಸಾಮಾಜಿಕ ಜಾಲತಾಣ ‘X’ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಶ್ ಅವರ ಸಾಹಸದ ಬಗ್ಗೆ ಬರೆದಿರುವ ಸುದೀಪ್, “ಯಾವಾಗಲೂ ಅಲೆಯ ವಿರುದ್ಧ ಹೋಗಲು ಬಹಳಷ್ಟು ಧೈರ್ಯ ಮತ್ತು ಸಮಯ ಬೇಕಾಗುತ್ತದೆ. ಈ ನಿಮ್ಮ ಹೊಸ ಹೆಜ್ಜೆ ನಿಮ್ಮನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯಲಿ. ನೀವು ಹೊಸ ದಿಕ್ಕಿನತ್ತ ಕಣ್ಣಿಟ್ಟಿದ್ದೀರಿ, ಚಿಯರ್ಸ್!” ಎಂದು ಹಾರೈಸುವ ಮೂಲಕ ಯಶ್ ಬೆನ್ನಿಗೆ ನಿಂತಿದ್ದಾರೆ.

