ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಜೈಲರ್ 2’ ಚಿತ್ರೀಕರಣದ ಅಂತಿಮ ಹಂತ ತಲುಪಿದೆ. ಮೊದಲ ಭಾಗದಂತೆ ಈ ಬಾರಿಯೂ ಸಿನಿಮಾದಲ್ಲಿ ತಾರೆಯರ ದಂಡೇ ಇರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಅದರಲ್ಲೂ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಗಟ್ಟಿಯಾಗಿ ಕೇಳಿಬಂದಿತ್ತು. ಆದರೆ ಈಗ ಬಂದಿರುವ ಲೇಟೆಸ್ಟ್ ಮಾಹಿತಿ ರಜನಿ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆ ತರುವಂತಿದೆ.
ವರದಿಗಳ ಪ್ರಕಾರ, ಶಾರುಖ್ ಖಾನ್ ಪ್ರಸ್ತುತ ತಮ್ಮ ಬಹುನಿರೀಕ್ಷಿತ ಚಿತ್ರ ‘ಕಿಂಗ್’ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ‘ಜೈಲರ್ 2’ ತಂಡ ಶಾರುಖ್ ಅವರಿಂದ ಕೇವಲ 5 ದಿನಗಳ ಕಾಲಾವಕಾಶ ಕೇಳಿತ್ತು. ಶಾರುಖ್ ಕೂಡ ಇದಕ್ಕೆ ಆರಂಭದಲ್ಲಿ ಸಮ್ಮತಿಸಿದ್ದರು ಎನ್ನಲಾಗಿತ್ತು. ಆದರೆ ‘ಕಿಂಗ್’ ಚಿತ್ರಕ್ಕಾಗಿ ಅವರು ವಿಭಿನ್ನವಾಗಿ ತಮ್ಮ ಲುಕ್ ಬದಲಿಸಿಕೊಂಡಿದ್ದು, ಅದೇ ಲುಕ್‌ನಲ್ಲಿ ‘ಜೈಲರ್ 2’ ನಲ್ಲಿ ಕಾಣಿಸಿಕೊಳ್ಳುವುದು ಅವರಿಗೆ ಇಷ್ಟವಿಲ್ಲವಂತೆ. ಅಲ್ಲದೆ, ‘ಕಿಂಗ್’ ಸಿನಿಮಾ ತೆರೆಗೆ ಬರುವ ಮುನ್ನ ಬೇರೆ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬಾರದು ಎಂಬುದು ಅವರ ಕಟ್ಟುನಿಟ್ಟಿನ ನಿರ್ಧಾರ ಎನ್ನಲಾಗಿದೆ.
ಹಿಂದೆ ಶಾರುಖ್ ಖಾನ್ ನಟನೆಯ ‘ರಾ ಒನ್’ ಚಿತ್ರದಲ್ಲಿ ರಜನಿಕಾಂತ್ ಅವರು ‘ಚಿಟ್ಟಿ’ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಶಾರುಖ್ ಅವರಿಗೆ ಸಾಥ್ ನೀಡಿದ್ದರು. ಇದೀಗ ಶಾರುಖ್ ಅವರು ‘ಜೈಲರ್ 2’ ನಲ್ಲಿ ನಟಿಸುವ ಮೂಲಕ ಆ ಪ್ರೀತಿಯ ಋಣ ತೀರಿಸಲಿದ್ದಾರೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಈಗ ಈ ಕನಸು ಸದ್ಯಕ್ಕೆ ನನಸಾಗುವ ಲಕ್ಷಣಗಳು ಕಾಣುತ್ತಿಲ್ಲ.
ಶಾರುಖ್ ಖಾನ್ ಇಲ್ಲದಿದ್ದರೂ, ‘ಜೈಲರ್ 2’ ನಲ್ಲಿ ಕನ್ನಡದ ಹೆಮ್ಮೆ ಶಿವಣ್ಣ, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಮತ್ತು ಬಾಲಿವುಡ್‌ನ ಜಾಕಿ ಶ್ರಾಫ್ ಇರಲಿದ್ದಾರೆ.



