ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನಲ್ಲಿ ಹೆಚ್ಚು ರೇಟಿಂಗ್ ಪಡೆದ ಚಿತ್ರಗಳ ಪಟ್ಟಿಯಲ್ಲಿ ಈಗ ಹೊಸ ಸೇರ್ಪಡೆಯಾಗಿದೆ. ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸಿರುವ ‘ಮಹಾವತಾರ ನರಸಿಂಹ’ ಅನೇಕ ದಾಖಲೆಗಳನ್ನು ಪುಡಿಮಾಡುತ್ತಿದೆ. ಈ ಪೌರಾಣಿಕ ಅನಿಮೇಟೆಡ್ ಸಿನಿಮಾ ಬಿಡುಗಡೆಯಾದ ಮೊದಲ ವಾರದಿಂದಲೇ ಎಲ್ಲಾ ಶೋಗಳು ಹೌಸ್‌ಫುಲ್ ಆಗುತ್ತಿರುವ ದೃಶ್ಯಗಳು ಕಂಡುಬರುತ್ತಿದ್ದವು.
ನಿರ್ದೇಶಕ ಅಶ್ವಿನ್ ಕುಮಾರ್ ಅವರ ನೂತನ ಪ್ರಯೋಗ ಈ ಚಿತ್ರದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದ್ದು, ಈ ಸಿನಿಮಾ ಪ್ರಾರಂಭದಿಂದ ಅಂತ್ಯವರೆಗೆ ಪ್ರೇಕ್ಷಕರನ್ನು ಆಕರ್ಷಿಸಿದೆ. ಚಿತ್ರದಲ್ಲಿ ಯಾರೊಬ್ಬ ನಾಯಕ ಅಥವಾ ನಾಯಕಿ ಇಲ್ಲದಿದ್ದರೂ, ಕಥಾವಸ್ತುವಿನ ಶಕ್ತಿ, ದೃಶ್ಯರೂಪದ ಹೊಳಪು ಮತ್ತು ಭಾವಾತ್ಮಕತೆಯೊಳಗಿನ ಅನಿಮೇಷನ್ ಎಲ್ಲವೂ ಸಾಕಷ್ಟು ಮೆಚ್ಚುಗೆ ಗಳಿಸಿವೆ.
ಜುಲೈ 25 ರಂದು ಬಿಡುಗಡೆಯಾದ ಈ ಸಿನಿಮಾ ಕೇವಲ 10 ದಿನಗಳೊಳಗೆ 91 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ. ವಿಶ್ವದ ಬಾಕ್ಸ್ ಆಫೀಸ್ ನಲ್ಲಿ ಈ ಚಿತ್ರ 100 ಕೋಟಿ ರೂಪಾಯಿ ಗಡಿ ದಾಟಿದ್ದು, ಬಜೆಟ್ ಕೇವಲ 5 ಕೋಟಿ ರೂಪಾಯಿಯಾದರೂ ಸಾವಿರಗುಣದ ಮೌಲ್ಯವನ್ನು ಪಡೆದುಕೊಂಡಿದೆ. ಇದಲ್ಲದೇ, IMDb ವೆಬ್‌ಸೈಟ್‌ನಲ್ಲಿ ಈ ಚಿತ್ರ 9.6 ರೇಟಿಂಗ್ ಪಡೆದುಕೊಂಡಿದ್ದು, ಭಾರತದ ಇತಿಹಾಸದಲ್ಲೇ ಅತ್ಯುನ್ನತ ಸ್ಥಾನವನ್ನು ಹೊಂದಿದೆ.
ಚಿತ್ರದ ಕಥೆ ಪುರಾಣದಲ್ಲಿ ಹೇಳಲ್ಪಟ್ಟ ವಿಷ್ಣುವಿನ ನಾಲ್ಕನೇ ಅವತಾರದಾದ ನರಸಿಂಹನ ಕಥೆಯಾದರೂ, ನಿರ್ದೇಶಕರ ದೃಷ್ಟಿಕೋನ ಮತ್ತು ನಿರೂಪಣಾ ಶೈಲಿ ಈ ಚಿತ್ರವನ್ನು ವಿಶಿಷ್ಟವಾಗಿಸಿದೆ. ಭಕ್ತ ಪ್ರಹ್ಲಾದನನ್ನು ರಕ್ಷಿಸಲು ವಿಷ್ಣು ನರಸಿಂಹನ ರೂಪದಲ್ಲಿ ಪ್ರತ್ಯಕ್ಷವಾಗುವ ಘಟನೆಯನ್ನು ಆಧಾರವನ್ನಾಗಿಸಿಕೊಂಡಿರುವ ಈ ಸಿನಿಮಾ ಇಂದಿಗೂ ಮನಸ್ಸಿಗೆ ಬಿದ್ದ ಕಥೆಯನ್ನ ಹೊಸತಾಗಿ, ಪ್ರಭಾವಶಾಲಿಯಾಗಿ ಪ್ರಸ್ತುತಪಡಿಸಿದೆ.