ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಮೂಡಿಬಂದಿರುವ ಪೌರಾಣಿಕ ಆನಿಮೇಟೆಡ್ ಸಿನಿಮಾ ಮಹಾವತಾರ ನರಸಿಂಹ ಪ್ರೇಕ್ಷಕರ ಮನಸೂರೆಗೊಂಡು ಬಾಕ್ಸ್ ಆಫೀಸ್ನಲ್ಲಿ ಭಾರೀ ಯಶಸ್ಸು ಸಾಧಿಸಿದೆ. ಜುಲೈ 25 ರಂದು ಬಿಡುಗಡೆಯಾದ ಈ ಸಿನಿಮಾ, ಭಾರತದಲ್ಲಿ 200 ಕೋಟಿ ರೂ. ಕ್ಲಬ್ಗೆ ಸೇರ್ಪಡೆಯಾದ ಮೊದಲ ಆನಿಮೇಟೆಡ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಶ್ವಿನ್ ಕುಮಾರ್ ನಿರ್ದೇಶನದ ಈ ಚಿತ್ರವು ತನ್ನ ಅದ್ಭುತ ದೃಶ್ಯ ವೈಭವ, ಆಧ್ಯಾತ್ಮಿಕ ಅಂಶಗಳು ಮತ್ತು ಪೌರಾಣಿಕ ಕಥೆಯ ಆಧುನಿಕ ರೂಪಾಂತರದಿಂದ ಸಿನಿಪ್ರಿಯರನ್ನು ಆಕರ್ಷಿಸಿದೆ. ಸನ್ ಆಫ್ ಸರ್ದಾರ್ 2, ವಾರ್ 2 ಮತ್ತು ಕೂಲಿ ಮುಂತಾದ ದೊಡ್ಡ ಚಿತ್ರಗಳ ಸ್ಪರ್ಧೆಯ ನಡುವೆಯೂ, ಸಿನಿಮಾ ತನ್ನ ಬಲವಾದ ಸ್ಥಾನವನ್ನು ಕಾಪಾಡಿಕೊಂಡಿದೆ.
ವರದಿಗಳ ಪ್ರಕಾರ, ಬಿಡುಗಡೆಯ 27ನೇ ದಿನವಾದ ಬುಧವಾರದಂದು ಮಹಾವತಾರ್ ನರಸಿಂಹ ದೇಶೀಯ ಬಾಕ್ಸ್ ಆಫೀಸ್ನಲ್ಲಿ 1.75 ಕೋಟಿ ರೂ. ಗಳಿಸಿದೆ. ಇದರಿಂದ 27 ದಿನಗಳಲ್ಲಿ ಒಟ್ಟು 217.1 ಕೋಟಿ ರೂ. ಕಲೆಕ್ಷನ್ ದಾಖಲಿಸಿದೆ. ವಿಶ್ವಾದ್ಯಂತ ಚಿತ್ರವು ಈಗಾಗಲೇ 250 ಕೋಟಿ ರೂ. ದಾಟಿದೆ ಮತ್ತು ತಿಂಗಳ ಅಂತ್ಯದೊಳಗೆ 300 ಕೋಟಿ ರೂ. ತಲುಪುವ ನಿರೀಕ್ಷೆ ಇದೆ.
ಬಹು ಭಾಷೆಗಳಲ್ಲಿ ಬಿಡುಗಡೆಯಾದರೂ, ಚಿತ್ರದ ಹಿಂದಿ ಆವೃತ್ತಿಯೇ ಹೆಚ್ಚಿನ ಕಲೆಕ್ಷನ್ಗೆ ಕಾರಣವಾಗಿದೆ. ಪ್ರಥಮ ದಿನ 2 ಕೋಟಿ ರೂ.ಗೂ ಕಡಿಮೆ ಗಳಿಕೆ ಕಂಡಿದ್ದ ಸಿನಿಮಾ, ಬಾಯಿ ಮಾತಿನ ಪ್ರಚಾರ ಮತ್ತು ಉತ್ತಮ ವಿಮರ್ಶೆಗಳ ಪರಿಣಾಮವಾಗಿ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಂಡಿದೆ.
ಚಿತ್ರದ OTT ಬಿಡುಗಡೆ ದಿನಾಂಕವನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ವ್ಯಾಪಾರ ವಿಶ್ಲೇಷಕರ ಪ್ರಕಾರ, ಹಿಂದಿ ಆವೃತ್ತಿ ಜಿಯೋಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಸಲಾರ್ ಮತ್ತು ರಾಜಕುಮಾರ ಸಿನಿಮಾಗಳೂ ಇದೇ ವೇದಿಕೆಯಲ್ಲಿ ಬಿಡುಗಡೆಯಾದುದರಿಂದ ಈ ಊಹೆಗೆ ಹೆಚ್ಚು ಬಲ ಸಿಕ್ಕಿದೆ.