ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷದ ಕೊನೆಯ ಹಂತದಲ್ಲಿ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ದೊಡ್ಡ ಫಿಲ್ಮ್ ರಿಲೀಸ್ ಸಜ್ಜಾಗಿದೆ. ಅದುವೇ ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನಿಮಾ. ಈಗಲೇ ಸಾಕಷ್ಟು ಕುತೂಹಲ ಮೂಡಿಸಿರುವ ಟ್ರೇಲರ್, ಬಿಡುಗಡೆಯೊಂದಿಗೆ ಸಿನಿಮಾ ಕುರಿತ ಚರ್ಚೆ ಗರಿಗೆದರಿದ್ದು, ಸುದೀಪ್ ಅವರ ಆ್ಯಕ್ಷನ್ ಅವತಾರ ಮತ್ತೆ ಪ್ರೇಕ್ಷಕರ ಗಮನ ಸೆಳೆದಿದೆ.
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 25ರಂದು ಚಿತ್ರವನ್ನು ಜಾಗತಿಕವಾಗಿ ತೆರೆಗೆ ತರಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಮಾರ್ಕ್’ ಸಿನಿಮಾಗೆ ‘ಸತ್ಯಜ್ಯೋತಿ ಫಿಲ್ಮ್ಸ್’ ಮತ್ತು ‘ಕಿಚ್ಚ ಕ್ರಿಯೇಷನ್ಸ್’ ಬಂಡವಾಳ ಹಾಕಿವೆ.
ಇದೇ ಸಂಸ್ಥೆಗಳ ಹಿಂದೆ ಬಿಡುಗಡೆಯಾಗಿದ್ದ ‘ಮ್ಯಾಕ್ಸ್’ ಚಿತ್ರದ ಯಶಸ್ಸು ಈ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೊಳ್ಳುತ್ತಿರುವ ‘ಮಾರ್ಕ್’ ಸಿನಿಮಾ ದೊಡ್ಡ ಮಟ್ಟದ ಪ್ರೇಕ್ಷಕರನ್ನು ತಲುಪುವ ಗುರಿ ಹೊಂದಿದೆ.
ಸುದೀಪ್ ಅವರ ಗಂಭೀರ ಅಭಿನಯ ಮತ್ತು ತೀವ್ರ ಆ್ಯಕ್ಷನ್ ದೃಶ್ಯಗಳು ಪ್ರಭಾವ ಬೀರಿವೆ. ಅಜನೀಶ್ ಲೋಕನಾಥ್ ಅವರ ಸಂಗೀತ ಟ್ರೇಲರ್‌ಗೆ ಹೆಚ್ಚಿನ ತೂಕ ನೀಡಿದ್ದು, ಶೇಖರ್ ಚಂದ್ರ ಅವರ ಛಾಯಾಗ್ರಹಣವೂ ಮೆಚ್ಚುಗೆ ಪಡೆದಿದೆ.
ಯೋಗಿಬಾಬು, ಶೈನ್ ಟಾಮ್ ಚಾಕೋ ಸೇರಿದಂತೆ ಹಲವು ಪ್ರಮುಖ ಕಲಾವಿದರು ಚಿತ್ರದ ಭಾಗವಾಗಿದ್ದಾರೆ. ಟ್ರೇಲರ್ ನೋಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ‘ಮಾರ್ಕ್’ ಸೂಪರ್ ಹಿಟ್ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

