ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಅವರು ವೈಯಕ್ತಿಕ ಜೀವನದ ಹೊಸ ಅಧ್ಯಾಯದ ನಂತರ ಮತ್ತೆ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗಷ್ಟೇ ಖ್ಯಾತ ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ವಿವಾಹವಾದ ಸಮಂತಾ, ಇದೀಗ ತಮ್ಮ ಬಹುನಿರೀಕ್ಷಿತ ಚಿತ್ರ ‘ಮಾ ಇಂಟಿ ಬಂಗಾರಂ’ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.
ಸುಮಾರು ಎರಡು ವರ್ಷಗಳ ಸುದೀರ್ಘ ವಿರಾಮದ ನಂತರ ಸಮಂತಾ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಸಮಂತಾ ಗ್ಲಾಮರ್ ಲುಕ್ ಬಿಟ್ಟು ಸೀರೆಯಲ್ಲಿ ‘ರಫ್ ಆ್ಯಂಡ್ ಟಫ್’ ಆಗಿ ಕಾಣಿಸಿಕೊಂಡಿದ್ದಾರೆ. ವಿಲನ್‌ಗಳ ಮೂಳೆ ಮುರಿಯಲು ಸನ್ನದ್ಧವಾಗಿರುವ ‘ದುರ್ಗೆ’ಯ ಅವತಾರದಲ್ಲಿರುವ ಅವರನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಈ ಸಿನಿಮಾ ಸಮಂತಾ ಪಾಲಿಗೆ ಅತ್ಯಂತ ವಿಶೇಷವಾಗಿದೆ. ಏಕೆಂದರೆ, ಮುಖ್ಯ ಪಾತ್ರದಲ್ಲಿ ನಟಿಸುವುದರ ಜೊತೆಗೆ ಸ್ವತಃ ಸಮಂತಾ ಅವರೇ ತಮ್ಮ ಸ್ವಂತ ಪ್ರೊಡಕ್ಷನ್ ಹೌಸ್ ಮೂಲಕ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಆ ಮೂಲಕ ಪೂರ್ಣ ಪ್ರಮಾಣದ ನಿರ್ಮಾಪಕಿಯಾಗಿಯೂ ಅವರು ಗುರುತಿಸಿಕೊಂಡಿದ್ದಾರೆ.
ಫಸ್ಟ್ ಲುಕ್ ಪೋಸ್ಟರ್ ಜೊತೆಗೆ ಚಿತ್ರತಂಡ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಜನವರಿ 9ರಂದು ಬೆಳಿಗ್ಗೆ 10 ಗಂಟೆಗೆ ‘ಮಾ ಇಂಟಿ ಬಂಗಾರಂ’ ಚಿತ್ರದ ಅಧಿಕೃತ ಟೀಸರ್ ಬಿಡುಗಡೆಯಾಗಲಿದೆ. ಸದ್ಯಕ್ಕೆ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿಲ್ಲವಾದರೂ, ಮದುವೆಯ ನಂತರ ಸಮಂತಾ ನಟನೆಯ ಮೊದಲ ಸಿನಿಮಾ ಇದಾಗಿರುವುದರಿಂದ ಚಿತ್ರರಂಗದಲ್ಲಿ ಭಾರೀ ಕುತೂಹಲ ಮೂಡಿಸಿದೆ.

