March 5, 2026
Thursday, March 5, 2026
spot_img

CINE | ಯುದ್ಧದ ನೆಪ, ವ್ಯವಹಾರದ ಆಟ: ‘ಟಾಕ್ಸಿಕ್’ ರಿಲೀಸ್ ಡೇಟ್ ಬದಲಾವಣೆಯ ಹಿಂದಿದೆ ಬಿಗ್ ಪ್ಲಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19 ರಂದು ತೆರೆಕಾಣಬೇಕಿತ್ತು. ಆದರೆ ಚಿತ್ರತಂಡ ಅನಿವಾರ್ಯವಾಗಿ ಬಿಡುಗಡೆಯನ್ನು ಮುಂದೂಡಿದೆ. ಅಧಿಕೃತವಾಗಿ ಮಧ್ಯಪ್ರಾಚ್ಯದ ಯುದ್ಧದ ಪರಿಸ್ಥಿತಿಯನ್ನು ಕಾರಣವಾಗಿ ನೀಡಲಾಗಿದ್ದರೂ, ಇದರ ಹಿಂದೆ ದೊಡ್ಡ ಮಟ್ಟದ ವಿತರಣಾ ಮಾರುಕಟ್ಟೆಯ ಲೆಕ್ಕಾಚಾರಗಳು ಕೆಲಸ ಮಾಡಿವೆ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ, ಉತ್ತರ ಭಾರತ ಮತ್ತು ವಿದೇಶಿ ಮಾರುಕಟ್ಟೆಯ ವಿತರಕರಿಂದ ಚಿತ್ರತಂಡದ ಮೇಲೆ ಭಾರಿ ಒತ್ತಡವಿತ್ತು. ಬಾಲಿವುಡ್‌ನ ಬಹುನಿರೀಕ್ಷಿತ ‘ಧುರಂಧರ್ 2’ ಸಿನಿಮಾದ ಬಿಡುಗಡೆಯೂ ಅದೇ ಸಮಯದಲ್ಲಿ ಇರುವುದರಿಂದ ‘ಟಾಕ್ಸಿಕ್’ಗೆ ಸ್ಕ್ರೀನ್‌ಗಳ ಹಂಚಿಕೆಯಲ್ಲಿ ಭಾರಿ ಹೊಡೆತ ಬೀಳುವ ಆತಂಕವಿತ್ತು. ಉತ್ತರ ಭಾರತದಲ್ಲಿ ‘ಧುರಂಧರ್ 2’ ಅಬ್ಬರದ ನಡುವೆ ‘ಟಾಕ್ಸಿಕ್’ಗೆ ಕೇವಲ 30% ಸ್ಕ್ರೀನ್‌ಗಳು ಮಾತ್ರ ಸಿಗುವ ಸಾಧ್ಯತೆಯಿತ್ತು. ಇದು ವಿತರಕರಿಗೆ ಭಾರಿ ನಷ್ಟ ತರುವ ಭೀತಿ ಮೂಡಿಸಿತ್ತು.

ಕೇವಲ ಉತ್ತರ ಭಾರತ ಮಾತ್ರವಲ್ಲದೆ, ಸೌದಿ ಅರೇಬಿಯಾ ಸೇರಿದಂತೆ ಹಲವು ದೇಶಗಳಲ್ಲಿ ಪ್ರಸ್ತುತ ಇರುವ ಅಸ್ಥಿರತೆಯಿಂದಾಗಿ ಸಿನಿಮಾ ಬಿಡುಗಡೆ ಮಾಡುವುದು ಅಸಾಧ್ಯವಾಗಿತ್ತು. ವಿದೇಶಿ ವಿತರಣಾ ಹಕ್ಕು ಪಡೆದವರು ಸಹ ಸಿನಿಮಾ ಮುಂದೂಡುವಂತೆ ಯಶ್ ಹಾಗೂ ನಿರ್ಮಾಪಕ ವೆಂಕಟ್ ಅವರ ಮೇಲೆ ಸತತ ಒತ್ತಡ ಹೇರಿದ್ದರು ಎನ್ನಲಾಗಿದೆ.

ದಕ್ಷಿಣ ಭಾರತದಲ್ಲಿ ‘ಧುರಂಧರ್ 2’ ಸಿನಿಮಾವನ್ನು ಎದುರಿಸುವ ಶಕ್ತಿ ‘ಟಾಕ್ಸಿಕ್’ಗೆ ಇದ್ದರೂ, ಜಾಗತಿಕ ಮಟ್ಟದಲ್ಲಿ ಅತೀ ಹೆಚ್ಚು ಗಳಿಕೆ ಮಾಡುವ ಉದ್ದೇಶ ಹೊಂದಿರುವ ಚಿತ್ರತಂಡಕ್ಕೆ ಅನಗತ್ಯ ಸ್ಪರ್ಧೆ ಬೇಡವೆನಿಸಿದೆ. ಈಗಾಗಲೇ ಮೊದಲ ಭಾಗದಿಂದ 1300 ಕೋಟಿಗೂ ಹೆಚ್ಚು ಹಣ ಗಳಿಸಿರುವ ‘ಧುರಂಧರ್’ ತಂಡಕ್ಕೆ ಈ ಸ್ಪರ್ಧೆಯಿಂದ ದೊಡ್ಡ ನಷ್ಟವಾಗದಿದ್ದರೂ, ‘ಟಾಕ್ಸಿಕ್’ ಸಿನಿಮಾದ ಯಶಸ್ಸು ಯಶ್ ಅವರ ಮುಂದಿನ ಸಿನಿ ಜರ್ನಿಗೆ ಅತ್ಯಂತ ಪ್ರಮುಖವಾಗಿದೆ. ಹೀಗಾಗಿ, ನಷ್ಟ ಮಾಡಿಕೊಳ್ಳುವ ಬದಲು ಜಾಣತನದಿಂದ ಹಾದಿ ಬದಲಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಚಿತ್ರತಂಡ ಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !