ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಸು ಫ್ರಮ್ ಸೋ’ ಮೂಲಕ ಪ್ರೇಕ್ಷಕರ ಮನಗೆದ್ದ ರಾಜ್ ಬಿ ಶೆಟ್ಟಿ, ಇದೀಗ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಮೆರೆಯಲಿದ್ದಾರೆ. ಅವರ ಹೊಸ ಚಿತ್ರ ‘ಕರಾವಳಿ’ ಯಲ್ಲಿನ ‘ಮಾವೀರ’ ಪಾತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. ಈಗಾಗಲೇ ‘ಸು ಫ್ರಮ್ ಸೋ’ನ ‘ಕರುಣಾಕರ ಗುರೂಜಿ’ ಪಾತ್ರದಿಂದ ಹಾಸ್ಯ ಮತ್ತು ವ್ಯಂಗ್ಯ ಮಿಶ್ರಿತ ಭಿನ್ನ ಅಭಿನಯ ನೀಡಿದ ನಟ, ಈ ಸಿನಿಮಾದಲ್ಲೂ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಪಾತ್ರಕ್ಕಾಗಿ ರಾಜ್ ಬಿ ಶೆಟ್ಟಿ ತಮ್ಮ ಲುಕ್ ಅನ್ನು ಸಂಪೂರ್ಣ ಬದಲಿಸಿದ್ದಾರೆ. ಶಾರ್ಟ್ ಹೇರ್ ಲುಕ್ ಹಾಗೂ ವಿಭಿನ್ನ ವಿಗ್ ಬಳಕೆ ಮೂಲಕ ಮಾವೀರ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ವಿಭಿನ್ನ ರೂಪದಲ್ಲಿ ಅವರು ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಹೊಸ ಕುತೂಹಲ ಹುಟ್ಟಿಸಿದೆ. ಒಂದು ಕೈಯಲ್ಲಿ ಪಂಜು ಹಿಡಿದಿರುವ ಅವರ ನೋಟ, ಯಾವುದೇ ಸಾಮಾನ್ಯ ಪಾತ್ರವಲ್ಲ ಎಂಬ ಸ್ಪಷ್ಟ ಸಂಕೇತ ನೀಡುತ್ತದೆ.
ಈ ಪೋಸ್ಟರ್ ಒಂದೇ, ಸಿನಿಮಾ ಬಗ್ಗೆ ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ. ರಾಜ್ ಬಿ ಶೆಟ್ಟಿ ಕೋಣ ಓಡಿಸೋ ವ್ಯಕ್ತಿಯೋ? ಅಥವಾ ಕಂಬಳದ ಹಿನ್ನಲೆಯಲ್ಲಿ ಏನಾದರೂ ಕಥೆಯೋ? ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, ಚಿತ್ರದ ಸೌಂದರ್ಯ ಹಾಗೂ ನಟನಟಿಯರ ಆಯ್ಕೆ ಗಮನ ಸೆಳೆಯುತ್ತದೆ.
ಚಿತ್ರದ ನಿರ್ದೇಶನ ಮಾಡಿರುವುದು ಗುರುದತ್ ಗಾಣಿಗ. ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸಿದ್ದು, ನಟಿ ಸಂಪದಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮಿತ್ರ ಸೇರಿದಂತೆ ಹಲವು ಕಲಾವಿದರು ವಿಭಿನ್ನ ಪಾತ್ರಗಳಲ್ಲಿ ಭಾಗವಹಿಸಿದ್ದಾರೆ. ಈಗಾಗಲೇ ರಾಜ್ ಬಿ ಶೆಟ್ಟಿ ಪಾತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಮಾವೀರ ಪಾತ್ರವು ಸ್ಪೆಷಲ್ ಅಪಿಯರೆನ್ಸ್ ಆಗಿರಬಹುದೆಂಬ ಮಾತು ಕೂಡ ಹರಿದಾಡುತ್ತಿದೆ.
‘ಸು ಫ್ರಮ್ ಸೋ’ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ‘ಕರಾವಳಿ’ ಚಿತ್ರವೂ ತೀವ್ರ ನಿರೀಕ್ಷೆ ಮೂಡಿಸುತ್ತಿದೆ. ‘ಬಾವ ಬಂದರೋ’ ಹಾಡಿನಲ್ಲಿ ರಾಜ್ ಬಿ ಶೆಟ್ಟಿ ಮಾಡಿದ ಡ್ಯಾನ್ಸ್ ಕೂಡ ಪ್ರೇಕ್ಷಕರ ಮನಗೆದ್ದಿತ್ತು. ಇದೀಗ ‘ಕರಾವಳಿ’ ಪೋಸ್ಟರ್ ಬಿಡುಗಡೆಯಿಂದ ಸಿನಿಮಾದತ್ತ ಗಮನ ಸೆಳೆದಿದ್ದು, ಅಧಿಕೃತ ಟ್ರೈಲರ್ ಹೊರಬೀಳುವವರೆಗೆ ಕುತೂಹಲ ಮುಂದುವರೆಯಲಿದೆ.