February 4, 2026
Wednesday, February 4, 2026
spot_img

CINE | ಪ್ರೇಕ್ಷಕರ ಬೇಸರಕ್ಕೆ ಬೆಲೆ ಕೊಟ್ಟ ರಾಜಮೌಳಿ: 2 ಭಾಗಗಳ ಸೀಕ್ವೆಲ್ ಸಂಪ್ರದಾಯಕ್ಕೆ ಬಿತ್ತು ಬ್ರೇಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದಲ್ಲಿ ‘ಬಾಹುಬಲಿ’ ಮೂಲಕ ಸಿನಿಮಾವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡುವ ಹೊಸ ಅಲೆ ಎಬ್ಬಿಸಿದ್ದ ರಾಜಮೌಳಿ, ಇದೀಗ ತಾವೇ ಶುರು ಮಾಡಿದ ಆ ಟ್ರೆಂಡ್‌ಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಮಹೇಶ್ ಬಾಬು ನಾಯಕತ್ವದ ಬಹುನಿರೀಕ್ಷಿತ ‘ವಾರಣಾಸಿ’ ಚಿತ್ರವನ್ನು ಎರಡು ಭಾಗಗಳ ಬದಲು ಒಂದೇ ಭಾಗದಲ್ಲಿ ತೆರೆಗೆ ತರಲು ಅವರು ನಿರ್ಧರಿಸಿದ್ದಾರೆ.

ಸದ್ಯದ ಸ್ಯಾಂಡಲ್‌ವುಡ್, ಟಾಲಿವುಡ್ ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರತಿಯೊಂದು ದೊಡ್ಡ ಸಿನಿಮಾವನ್ನು ಎರಡು ಭಾಗಗಳಲ್ಲಿ ಮಾಡುವುದು ಫ್ಯಾಶನ್ ಆಗಿಬಿಟ್ಟಿದೆ. ಆದರೆ, ಈ ಟ್ರೆಂಡ್‌ನಿಂದ ಪ್ರೇಕ್ಷಕರಿಗೆ ತುಸು ಬೇಸರ ಮೂಡಿದೆ ಎಂಬುದು ರಾಜಮೌಳಿ ಅವರ ಗಮನಕ್ಕೆ ಬಂದಿದೆ. ಮೊದಲ ಭಾಗ ಹಿಟ್ ಆಗದಿದ್ದರೆ ಎರಡನೇ ಭಾಗದ ಕಥೆಯೇ ಇರುವುದಿಲ್ಲ ಅಥವಾ ಅತಿಯಾದ ಕಾಯುವಿಕೆ ಪ್ರೇಕ್ಷಕರಲ್ಲಿ ಆಸಕ್ತಿ ಕುಂದಿಸುತ್ತಿದೆ ಎಂಬ ಅಸಮಾಧಾನ ಪ್ರೇಕ್ಷಕರಿಗಿದೆ. ಜನರ ನಾಡಿಮಿಡಿತ ಅರಿತಿರುವ ರಾಜಮೌಳಿ, ಕಥೆಯನ್ನು ಎಳೆದಾಡದೆ ನೇರವಾಗಿ ಒಂದೇ ಸಿನಿಮಾದಲ್ಲಿ ಮುಗಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ:

‘ವಾರಣಾಸಿ’ ಸಿನಿಮಾದ ಕಥೆ ಸುದೀರ್ಘವಾಗಿದ್ದು, ಚಿತ್ರದ ಅವಧಿ ಮೂರು ಗಂಟೆಗೂ ಮೀರಿರಲಿದೆ ಎನ್ನಲಾಗಿದೆ. ಅವಧಿ ಎಷ್ಟೇ ಇದ್ದರೂ, ಕಥೆಯ ವೇಗ ಮತ್ತು ಗುಣಮಟ್ಟಕ್ಕೆ ಧಕ್ಕೆಯಾಗದಂತೆ ಒಂದೇ ಭಾಗದಲ್ಲಿ ಸಂಪೂರ್ಣ ಚಿತ್ರಣ ನೀಡಲು ಚಿತ್ರತಂಡ ಸಜ್ಜಾಗಿದೆ. ಈ ನಿರ್ಧಾರದಿಂದ ಮಹೇಶ್ ಬಾಬು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಮಹೇಶ್ ಬಾಬು ನಾಯಕನಾಗಿರುವ ಈ ಬೃಹತ್ ಚಿತ್ರದಲ್ಲಿ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜಮೌಳಿ ಅವರ ಅದ್ಭುತ ಮೇಕಿಂಗ್ ಶೈಲಿಯಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್ 7 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !