ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹು ನಿರೀಕ್ಷಿತ ಪೌರಾಣಿಕ ಚಿತ್ರ ‘ರಾಮಾಯಣ’ದ ಕೆಲಸಗಳು ವೇಗವಾಗಿ ಸಾಗುತ್ತಿವೆ. ನಿರ್ದೇಶಕ ನಿತೇಶ್ ತಿವಾರಿ ಈ ಭಾರೀ ಬಜೆಟ್ ಸಿನಿಮಾವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡುವ ಯೋಜನೆ ರೂಪಿಸಿದ್ದು, ಮೊದಲ ಭಾಗ 2026ರ ದೀಪಾವಳಿಗೆ ಮತ್ತು ಎರಡನೇ ಭಾಗ 2027ರ ದೀಪಾವಳಿಗೆ ತೆರೆಗೆ ಬರಲಿದೆ.
ಈಗಾಗಲೇ ಚಿತ್ರದ ಮೊದಲ ಭಾಗದ ಶೂಟಿಂಗ್ ಬಹುತೇಕ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಇದೇ ವೇಳೆ ಎರಡನೇ ಭಾಗದ ಚಿತ್ರೀಕರಣ ಕೂಡ ಆರಂಭಗೊಂಡಿದೆ. ರಾಮನ ಪಾತ್ರದಲ್ಲಿ ನಟಿಸುತ್ತಿರುವ ರಣಬೀರ್ ಕಪೂರ್ ಸದ್ಯ ಸೆಟ್‌ನಲ್ಲಿ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದು, ಶೀಘ್ರದಲ್ಲೇ ಯಶ್ ಮತ್ತು ಸನ್ನಿ ಡಿಯೋಲ್ ಕೂಡ ತಂಡಕ್ಕೆ ಸೇರಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:
ಚಿತ್ರದಲ್ಲಿ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಭಾಗದಲ್ಲಿ ರಾವಣನ ಪಾತ್ರದ ಅವಧಿ ಕಡಿಮೆ ಇರಲಿದ್ದು, ಕಥೆಯ ಮುಂದುವರಿದ ಭಾಗ ಎರಡನೇ ಭಾಗದಲ್ಲಿ ನಡೆಯಲಿದೆ. ಹೀಗಾಗಿ ಸೀಕ್ವೆಲ್‌ನಲ್ಲಿ ಯಶ್ ಪಾತ್ರ ಹೆಚ್ಚು ಪ್ರಾಮುಖ್ಯತೆ ಪಡೆಯಲಿದೆ ಎನ್ನಲಾಗುತ್ತಿದೆ.
ಈ ಮಹತ್ವಾಕಾಂಕ್ಷಿ ಸಿನಿಮಾದಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ಹನುಮಂತನಾಗಿ ಸನ್ನಿ ಡಿಯೋಲ್ ಅಭಿನಯಿಸುತ್ತಿದ್ದಾರೆ. ಎರಡನೇ ಭಾಗದಲ್ಲಿ ಶ್ರೀಲಂಕಾ ಹಿನ್ನೆಲೆಯ ಕಥೆ ಇರಲಿದ್ದು, ಅದಕ್ಕಾಗಿ ಮುಂಬೈ ಸ್ಟುಡಿಯೋಗಳಲ್ಲಿ ಭಾರೀ ಸೆಟ್‌ಗಳನ್ನು ನಿರ್ಮಿಸಲಾಗಿದೆ. ಯಶ್ ರಾವಣನ ಲುಕ್‌ನಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಈಗಾಗಲೇ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.



