ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2025 (SIIMA) ಕಾರ್ಯಕ್ರಮ ದುಬೈನಲ್ಲಿ ಅದ್ದೂರಿಯಾಗಿ ನೆರವೇರಿತು. ಈ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಪ್ರಮುಖ ಸೆಲೆಬ್ರಿಟಿಗಳು ಹಾಜರಾಗಿ ಮಿಂಚಿದರು. 2024ರಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ ಈ ಬಾರಿ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಕನ್ನಡ ಚಿತ್ರರಂಗಕ್ಕೆ ಹಲವು ವಿಭಾಗಗಳಲ್ಲಿ ಗೌರವ ಸಿಕ್ಕಿದೆ.
ಕಿಚ್ಚ ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ನೀಡಿದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾದರು. ಆದರೆ ಅವರು ಸಿನಿಮಾ ಕೆಲಸದಿಂದಾಗಿ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ. ನಿರ್ದೇಶಕ ಉಪೇಂದ್ರ ಅವರಿಗೆ ‘ಯುಐ’ ಸಿನಿಮಾದ ಮೂಲಕ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ದೊರೆಯಿತು. ನಟಿ ಆಶಿಕಾ ರಂಗನಾಥ್ ಅವರು ‘02’ ಸಿನಿಮಾದ ಮೂಲಕ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದರು. ದುನಿಯಾ ವಿಜಯ್ ಅವರಿಗೆ ‘ಭೀಮ’ ಸಿನಿಮಾದ ಅಭಿನಯಕ್ಕಾಗಿ ಕ್ರಿಟಿಕ್ಸ್ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ. ಇದೇ ವೇಳೆ ‘ಕೃಷ್ಣಂ ಪ್ರಣಯ ಸಖಿ’ ಅತ್ಯುತ್ತಮ ಸಿನಿಮಾವಾಗಿ ಆಯ್ಕೆಗೊಂಡಿತು.
ಇದೇ ಸಂದರ್ಭದಲ್ಲಿ ಇನ್ನೂ ಅನೇಕ ಕಲಾವಿದರು ಪ್ರಶಸ್ತಿಗಳನ್ನು ಪಡೆದರು. ಬಿ. ಅಜನೀಶ್ ಲೋಕನಾಥ್ (ಅತ್ಯುತ್ತಮ ಸಂಗೀತ), ಜಾಕ್ ಸಿಂಗಂ (ಅತ್ಯುತ್ತಮ ಹಾಸ್ಯನಟ), ಸಂದೀಪ್ ಸುಂಕದ್ (ಚೊಚ್ಚಲ ನಿರ್ದೇಶಕ), ಸಮರ್ಜಿತ್ ಲಂಕೇಶ್ (ಚೊಚ್ಚಲ ನಟ), ಅಂಕಿತಾ ಅಮರ್ (ಚೊಚ್ಚಲ ನಟಿ) ಸೇರಿ ಹಲವಾರು ಮಂದಿ ತಮ್ಮ ತಮ್ಮ ವಿಭಾಗಗಳಲ್ಲಿ ಗೌರವ ಪಡೆದರು.