ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಪುಷ್ಪ’ ಮತ್ತು ‘ಪುಷ್ಪ 2’ ಮೂಲಕ ಖ್ಯಾತಿ ಪಡೆದ ಅಲ್ಲು ಅರ್ಜುನ್ ಇದೀಗ ವಿಶ್ವಮಟ್ಟದ ಚಿತ್ರವೊಂದರಲ್ಲಿ ನಟಿಸಲು ಸಜ್ಜಾಗಿದ್ದಾರೆ. ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನದಲ್ಲಿ ಹಾಲಿವುಡ್ ಶೈಲಿಯ ವೈಜ್ಞಾನಿಕ ಸಾಹಸ ಚಿತ್ರದಲ್ಲಿ ಅವರು ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ, ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಅಭಿನಯಿಸುತ್ತಿದ್ದು, ಕಥಾಹಂದರವೇ ಸಂಪೂರ್ಣವಾಗಿ ಬಾಹ್ಯಾಕಾಶದ ಸಾಹಸಮಯ ಲೋಕದ ಮೇಲೆ ಆಧಾರಿತವಾಗಿದೆ.
ಈ ಹೊಸ ಪ್ರಾಜೆಕ್ಟ್‌ಗೆ ಇದೀಗ ಮತ್ತೊಂದು ದೊಡ್ಡ ನಟನ ಸೇರ್ಪಡೆ ಆಗಿದೆ. ಖ್ಯಾತ ನಟ ವಿಜಯ್ ಸೇತುಪತಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರದ್ದು ದೊಡ್ಡ ಪಾತ್ರವಾಗದಿದ್ದರೂ, ಕಥೆಯ ಬೆಳವಣಿಗೆಯಲ್ಲಿ ನಿರ್ಣಾಯಕ ಪ್ರಭಾವ ಬೀರುವ ರೀತಿಯ ಪಾತ್ರವಾಗಲಿದೆ. ‘ಜವಾನ್’ ಸಿನಿಮಾದಲ್ಲಿ ಖಳನಾಯಕನಾಗಿ ಮೆಚ್ಚುಗೆ ಪಡೆದಿದ್ದ ಸೇತುಪತಿ, ಈ ಚಿತ್ರದಲ್ಲಿಯೂ ವಿಲನ್ ಮಾದರಿಯ ಪಾತ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಚಿತ್ರದ ಬಗ್ಗೆ ಇನ್ನೊಂದು ದೊಡ್ಡ ಕುತೂಹಲವೆಂದರೆ, ದೀಪಿಕಾ ಪಡುಕೋಣೆ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಹೈ-ಫೈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಪ್ರಾಜೆಕ್ಟ್‌ಗಾಗಿ ಅವರು ಬರೋಬ್ಬರಿ 100 ದಿನಗಳ ಕಾಲ್‌ಶೀಟ್ ನೀಡಿದ್ದಾರೆ. ಇಷ್ಟು ದೀರ್ಘ ಕಾಲ್‌ಶೀಟ್ ಅವರು ಸಂಜಯ್ ಲೀಲಾ ಭನ್ಸಾಲಿ ಸಿನಿಮಾಗಳಿಗೂ ನೀಡಿರಲಿಲ್ಲ ಎಂಬುದು ವಿಶೇಷ.
ಅಲ್ಲದೆ, ರಶ್ಮಿಕಾ ಮಂದಣ್ಣ ಹಾಗೂ ಮೃಣಾಲ್ ಠಾಕೂರ್ ಅತಿಥಿ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಮಾನವರು ಮತ್ತು ಏಲಿಯನ್ ಮಾದರಿಯ ಜೀವಿಗಳ ನಡುವೆ ನಡೆಯುವ ಸಂಘರ್ಷವೇ ಚಿತ್ರದ ಮೂಲ ಕಥೆ. ಚಿತ್ರದಲ್ಲಿ ಅತ್ಯಾಧುನಿಕ ವಾಹನಗಳು, ಆಯುಧಗಳು ಹಾಗೂ ಚಿತ್ರವಿಚಿತ್ರ ಜೀವಿಗಳು ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡಲಿವೆ. ಸಿನಿಮಾಕ್ಕೆ ಕಲಾನಿಧಿ ಮಾರನ್ ಬಂಡವಾಳ ಹೂಡಲಿದ್ದು, ಸಂಗೀತವನ್ನು ಅನಿರುದ್ಧ್ ರವಿಚಂದ್ರನ್ ನೀಡುತ್ತಿದ್ದಾರೆ. ಹಾಲಿವುಡ್‌ನ ಅಗ್ರಮಟ್ಟದ ವಿಎಫ್‌ಎಕ್ಸ್ ಸಂಸ್ಥೆಗಳು ಈ ಪ್ರಾಜೆಕ್ಟ್‌ನಲ್ಲಿ ತೊಡಗಿಕೊಂಡಿವೆ.