ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಸಿನಿಪ್ರೇಮಿಗಳಿಗೆ ಇದೀಗ ಅದ್ಭುತ ಅನುಭವ ನೀಡುತ್ತಿರುವ ಸಿನಿಮಾ ‘ಸು ಫ್ರಮ್ ಸೋ’. ಇತ್ತೀಚಿನ ದಿನಗಳಲ್ಲಿ 10 ಕೋಟಿ ಕಲೆಕ್ಷನ್ ದಾಟಲು ಹೋರಾಡುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಈ ಚಿತ್ರವೇ ಹೊಸ ವಿಶ್ವಾಸ ತುಂಬಿದೆ. ಯಾವುದೇ ಸ್ಟಾರ್ ನಟರಿಲ್ಲದೇ, ಕೇವಲ ಕಥೆ ಮತ್ತು ಕಂಟೆಂಟ್‌ನ ಬಲದಿಂದಲೇ ಜನರನ್ನು ಸೆಳೆಯಬಹುದು ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸಿಕೊಟ್ಟಿದೆ.
ರಿಲೀಸ್ ಆದ ಮೊದಲ ದಿನ ಕೇವಲ 75 ಸ್ಕ್ರೀನ್‌ಗಳಲ್ಲಿ ಪ್ರಾರಂಭವಾದ ಈ ಚಿತ್ರ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ನಂತರ ಎರಡನೇ ದಿನದಿಂದಲೇ ಹೆಚ್ಚಿನ ಥಿಯೇಟರ್‌ಗಳನ್ನು ಪಡೆದುಕೊಂಡಿತು. ಮೊದಲ ವಾರದ ಅಂತ್ಯದ ವೇಳೆಗೆ 240ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡಿತು. ಪ್ರೇಕ್ಷಕರ ಬಾಯಿ ಮಾತಿನ ಮೂಲಕ ಹರಡಿದ ಮೆಚ್ಚುಗೆ, ಈ ಚಿತ್ರವನ್ನು ದಿನೇ ದಿನೇ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ.
‘ಸು ಫ್ರಮ್ ಸೋ’ ಚಿತ್ರವು ಬಿಡುಗಡೆಯಾಗಿ ಕೇವಲ ಕೆಲವೇ ದಿನಗಳಲ್ಲಿ 50 ಕೋಟಿಗೂ ಹೆಚ್ಚು ಕಲೆಕ್ಷನ್ ಗಳಿಸಿತು. ಕೂಲಿ, ವಾರ್-2 ದೊಡ್ಡ ಸಿನಿಮಾಗಳ ಬಿರುಸಿನ ನಡುವೆಯೂ ಈ ಚಿತ್ರ ತನ್ನದೇ ಆದ ಜಾಗವನ್ನು ಪಡೆದುಕೊಂಡಿದೆ. ಮಲಯಾಳಂ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆಯಾದ ನಂತರ ಅಲ್ಲಿಯೂ ಅದ್ಭುತ ಪ್ರತಿಕ್ರಿಯೆ ಪಡೆಯುವಲ್ಲಿ ಯಶಸ್ವಿಯಾಯಿತು.
ಸಿನಿಮಾ ಕೇವಲ ಥಿಯೇಟರ್‌ಗಳಲ್ಲೇ ಅಲ್ಲ, ಡಿಜಿಟಲ್ ಹಕ್ಕುಗಳಲ್ಲಿಯೂ ಭರ್ಜರಿ ಗಳಿಕೆ ಸಾಧಿಸಿದೆ. ಒಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳಿಂದಲೇ 5.5 ಕೋಟಿ ರೂ. ಗಳಿಕೆ ಕಂಡಿರುವುದು ವಿಶೇಷ. ನಿರ್ಮಾಪಕರು ಹೂಡಿಕೆಯಾದ ಮೊತ್ತಕ್ಕಿಂತ ದುಪ್ಪಟ್ಟು ಹಣವನ್ನು ಕೇವಲ ಡಿಜಿಟಲ್ ರೈಟ್ಸ್ ಮುಖಾಂತರವೇ ವಾಪಸ್ ಪಡೆದುಕೊಂಡಿದ್ದಾರೆ.
ರಿಲೀಸ್‌ಗೆ ಮುಂಚೆ ಸಿನಿಮಾದ ಹೆಸರು, ಕಥೆ ಅಥವಾ ತಂಡದ ಬಗ್ಗೆ ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಆದರೆ ಬಿಡುಗಡೆಯಾದ ಬಳಿಕ ಪ್ರೇಕ್ಷಕರ ಮಾತು, ಸಾಮಾಜಿಕ ಜಾಲತಾಣಗಳ ಮೆಚ್ಚುಗೆ ಹಾಗೂ ನೈಜ ಪ್ರತಿಕ್ರಿಯೆಗಳ ಮೂಲಕ ಇದು ದೊಡ್ಡ ಹಿಟ್ ಆಗಿ ಹೊರಹೊಮ್ಮಿತು. ಹೊಸತನದ ಕಥೆ ಹಾಗೂ ವಿಭಿನ್ನ ಪ್ರಯೋಗದ ಕಾರಣ, ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರ ಮನ ಗೆದ್ದಿದೆ.