ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಯಶಸ್ವಿ ಚಿತ್ರ ‘ಸು ಫ್ರಮ್ ಸೋ’ ಇದೀಗ ತೆಲುಗು ನಾಡಿನತ್ತ ಸಾಗಿದ್ದು, ತೆಲುಗು ಪ್ರೇಕ್ಷಕರ ಮನದೊಳಗೆ ಹೆಜ್ಜೆ ಹಾಕಿದೆ. ಮಲಯಾಳಂನಲ್ಲಿಯೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಈ ಚಿತ್ರ ಈಗ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಆಗಸ್ಟ್ 8 ರಂದು ತೆರೆಕಾಣಲು ಸಜ್ಜಾಗಿದೆ.
ಹೈದರಾಬಾದ್‌ನ ವಿವಿಧ ಥಿಯೇಟರ್‌ಗಳಲ್ಲಿ ಈಗಾಗಲೇ 38 ಶೋಗಳನ್ನು ಈ ಚಿತ್ರಕ್ಕೆ ಮೀಸಲಿಡಲಾಗಿದೆ. ಇದು ಕನ್ನಡದಲ್ಲಿ ನಿರ್ಮಾಣಗೊಂಡು ತೆಲುಗಿನಲ್ಲಿ ಡಬ್ ಆಗಿ ಬಿಡುಗಡೆಯಾಗುತ್ತಿರುವ ಚಿತ್ರವೊಂದಕ್ಕೆ ಬಹಳ ದೊಡ್ಡ ಸಾಧನೆ. ವಿಶೇಷವೆಂದರೆ, ತೆಲುಗಿನ ಸೂಪರ್‌ಸ್ಟಾರ್ ಮಹೇಶ್ ಬಾಬು ಮಾಲೀಕತ್ವದ ಮಲ್ಟಿಪ್ಲೆಕ್ಸ್‌ಗಳಲ್ಲಿ ಈ ಚಿತ್ರಕ್ಕೆ 8 ಶೋಗಳು ಲಭಿಸಿವೆ. ಸಂಜೆ ವೇಳೆಗೆ ಈ ಸಂಖ್ಯೆಯು ಇನ್ನಷ್ಟು ಹೆಚ್ಚುವ ನಿರೀಕ್ಷೆಯೂ ಇದೆ.
‘ಪುಷ್ಪ’ ಹಾಗೂ ಇತರೆ ಬಿಗ್ ಬಜೆಟ್ ಚಿತ್ರಗಳ ಹಂಚಿಕೆಯಲ್ಲಿ ಪರಿಣತಿ ಹೊಂದಿರುವ ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ ಈ ಚಿತ್ರದ ತೆಲುಗು ವರ್ಶನ್ ಹಂಚಿಕೆಯ ಹೊಣೆ ಹೊತ್ತಿದೆ. ಅವರ ಭಾಗವಹಿಸುವಿಕೆ ಇಡೀ ತಂಡದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಹೀಗಾಗಿ ತೆಲುಗು ರಾಜ್ಯಗಳಲ್ಲಿ ಈ ಚಿತ್ರ ಭರ್ಜರಿಯಾಗಿ ತೆರೆಕಾಣುತ್ತಿರುವುದು ಊಹಿಸಿದಷ್ಟು ಮಟ್ಟದಲ್ಲಿ ಯಶಸ್ಸು ಕಂಡಿದೆ.
ಈ ಹಿಂದೆ ಮಲಯಾಳಂನಲ್ಲಿ ‘ಸು ಫ್ರಮ್ ಸೋ’ ಗೆ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಕೊಚ್ಚಿಯಂತಹ ನಗರಗಳಲ್ಲಿ ಶೋಗಳು ಯಶಸ್ವಿಯಾಗಿ ನಡೆಯುತ್ತಿದ್ದು, ತೆಲುಗು ಪ್ರೇಕ್ಷಕರೂ ಅದೇ ರೀತಿಯ ಮೆಚ್ಚುಗೆ ನೀಡುವ ಸಾಧ್ಯತೆಯಿದೆ. ಹೈದರಾಬಾದ್‌ನಷ್ಟೆ ಅಲ್ಲ, ವಿಜಯವಾಡ ಮತ್ತು ಇತರ ಪ್ರಮುಖ ನಗರಗಳಲ್ಲಿಯೂ ಚಿತ್ರಕ್ಕೆ ಶೋಗಳ ನಿರ್ದಿಷ್ಟ ಪ್ರಮಾಣದಲ್ಲಿ ಮೀಸಲಿಡಲಾಗಿದೆ.
ಆದಷ್ಟು ಮಾತ್ರವಲ್ಲದೆ, ಹೈದರಾಬಾದ್‌ನ ಕೆಲ ಥಿಯೇಟರ್‌ಗಳಲ್ಲಿ ಈ ಚಿತ್ರದ ಕನ್ನಡ ವರ್ಶನ್ ಕೂಡ ಪ್ರದರ್ಶನವಾಗುತ್ತಿದೆ. ಇಲ್ಲಿನ ಕನ್ನಡಿಗರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಇದುವರೆಗೆ ಐದು ಶೋಗಳು ಆಯೋಜನೆಯಾಗಿವೆ.
‘ಸು ಫ್ರಮ್ ಸೋ’ ಸಿನಿಮಾ ಎಲ್ಲೆಡೆ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಕನ್ನಡದ ಚಿತ್ರಮಂದಿಗೆ ಇದು ಮತ್ತೊಂದು ಹೆಮ್ಮೆ ತಂದಿರುವುದರಲ್ಲಿ ಅನುಮಾನವಿಲ್ಲ.