ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೆಪಿ ತುಮುನಾಡು ನಿರ್ದೇಶನ ಮತ್ತು ರಾಜ್ ಬಿ. ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಗೂ ಮೀರಿ ಸಾಧನೆ ಮುಂದುವರಿಸಿದೆ. ಮೂರನೇ ಭಾನುವಾರವಾದ ಆಗಸ್ಟ್ 10ರಂದು ಮಾತ್ರವೇ 6.50 ಕೋಟಿ ರೂಪಾಯಿ ಗಳಿಸಿರುವ ಈ ಚಿತ್ರ, ಹಿಂದಿನ ಭಾನುವಾರವೂ ಇದೇ ಮಟ್ಟದ ಕಲೆಕ್ಷನ್ ದಾಖಲಿಸಿತ್ತು. ಬಿಡುಗಡೆಯಾದ ಮೂರು ವಾರಗಳಾದರೂ ಸಿನಿಮಾದ ಹವಾ ಕಡಿಮೆಯಾಗದೆ ಮುಂದುವರಿದಿದೆ.
ಕನ್ನಡ ಭಾಷೆಯೊಂದಿಗೆ ತಮಿಳು ಮತ್ತು ತೆಲುಗು ಆವೃತ್ತಿಗಳಲ್ಲೂ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಮಲಯಾಳಂ ಪ್ರೇಕ್ಷಕರು ವಿಶೇಷವಾಗಿ ಮೆಚ್ಚಿದ್ದಾರೆ. ಚಿತ್ರ ಬಿಡುಗಡೆಯಾದ ಬಳಿಕ ಬಾಯಿಮಾತಿನ ಪ್ರಚಾರದಿಂದಾಗಿ ಹೆಚ್ಚು ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಇದೇ ಸಮಯದಲ್ಲಿ ಬಿಡುಗಡೆಯಾದ ಪವನ್ ಕಲ್ಯಾಣ್ ಅಭಿನಯದ ‘ಹರಿ ಹರ ವೀರ ಮಲ್ಲು’ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡದಿರುವುದು ‘ಸು ಫ್ರಮ್ ಸೋ’ಗೆ ಹೆಚ್ಚುವರಿ ಲಾಭವಾಗಿದೆ.
ಚಿತ್ರದ ನಿರ್ಮಾಣಕ್ಕೆ 4.50 ಕೋಟಿ ರೂಪಾಯಿ ಮತ್ತು ಪ್ರಚಾರಕ್ಕಾಗಿ 1 ಕೋಟಿ ರೂಪಾಯಿ ವೆಚ್ಚವಾಗಿದ್ದು, ಒಟ್ಟು ಖರ್ಚು ಸುಮಾರು 5.50 ಕೋಟಿ ರೂಪಾಯಿಯಷ್ಟಾಗಿದೆ. ಆದರೆ, ಪ್ರತಿ ವಾರಾಂತ್ಯದಲ್ಲಿಯೂ ಸಿನಿಮಾ ಬಜೆಟ್‌ಗಿಂತ ಹೆಚ್ಚಿನ ಕಲೆಕ್ಷನ್ ಗಳಿಸುತ್ತಿದೆ.
ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ‘ಸು ಫ್ರಮ್ ಸೋ’ ಒಟ್ಟು 63 ಕೋಟಿ ರೂಪಾಯಿ ಗಳಿಸಿದ್ದು, ಇದರಲ್ಲಿ ಮಲಯಾಳಂ ಆವೃತ್ತಿಯಿಂದ 4 ಕೋಟಿ ರೂಪಾಯಿ ಮತ್ತು ತೆಲುಗು ಆವೃತ್ತಿಯಿಂದ 60-80 ಲಕ್ಷ ರೂಪಾಯಿ ಬಂದಿದೆ. ಬುಕ್ ಮೈ ಶೋನಲ್ಲಿ 83 ಸಾವಿರ ಮಂದಿಯು ರೇಟಿಂಗ್ ನೀಡಿ, ಸರಾಸರಿ 9.4 ಅಂಕಗಳನ್ನು ದಾಖಲಿಸಿದೆ.
ನಿರೀಕ್ಷೆಗೂ ಮೀರಿ ಅಭಿಮಾನಿಗಳ ಮನ ಗೆದ್ದಿರುವ ‘ಸು ಫ್ರಮ್ ಸೋ’, ಮುಂದಿನ ದಿನಗಳಲ್ಲಿಯೂ ತನ್ನ ಯಶಸ್ಸಿನ ಹಾದಿ ಮುಂದುವರಿಸುವ ಸಾಧ್ಯತೆ ಹೆಚ್ಚು. ಬಜೆಟ್‌ಗಿಂತ ಅನೇಕ ಪಟ್ಟು ಹೆಚ್ಚು ಗಳಿಕೆ ಮಾಡಿಕೊಂಡಿರುವ ಈ ಸಿನಿಮಾ, ಇತ್ತೀಚಿನ ದಿನಗಳಲ್ಲಿನ ಕನ್ನಡ ಚಿತ್ರರಂಗದ ಪ್ರಮುಖ ಯಶಸ್ಸಾಗಿ ಗುರುತಿಸಿಕೊಂಡಿದೆ.