ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಸು ಫ್ರಮ್ ಸೋ’ ಸಿನಿಮಾ ಬಿಡುಗಡೆಯಾಗಿ ತಿಂಗಳಾಗುತ್ತಿದ್ದಂತೆ ದೇಶದೊಳಗೆ ಮಾತ್ರವಲ್ಲದೆ ಸಾಗರೋತ್ತರದಲ್ಲಿಯೂ ತನ್ನ ಯಶಸ್ವಿ ಓಟ ಮುಂದುವರೆಸುತ್ತಿದೆ. ಕನ್ನಡ, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿಯೂ ಸಮಾನವಾಗಿ ಕ್ರೇಜ್ ಗಳಿಸಿರುವ ಈ ಸಿನಿಮಾ ಇದೀಗ ದುಬೈ ಪ್ರೇಕ್ಷಕರಿಗೂ ತಲುಪಿದೆ. ಇದೇ ಕಾರಣಕ್ಕೆ ತಂಡದ ಪ್ರಮುಖ ಕಲಾವಿದರು ದುಬೈ ಪ್ರವಾಸ ಕೈಗೊಂಡಿದ್ದಾರೆ.
ದುಬೈಯಲ್ಲಿ ‘ಸು ಫ್ರಮ್ ಸೋ’ ಪ್ರದರ್ಶನ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದಂತೆ, ಅಲ್ಲಿನ ಕನ್ನಡಿಗರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್ 23 ರಂದು ಸಂಜೆ 5 ಗಂಟೆಗೆ ದುಬೈಯ ಅಲ್ ಘುರೈರ್ ಸೆಂಟರ್ನ ಸ್ಟಾರ್ ಸಿನೆಮಾಸ್ನಲ್ಲಿ ಹಾಗೂ ಆಗಸ್ಟ್ 24 ರಂದು ಸಂಜೆ 4 ಗಂಟೆಗೆ ಅಬುದಾಬಿಯ ಅಲ್ ವಹ್ದಾ ಮಾಲ್ನಲ್ಲಿರುವ ಸ್ಟಾರ್ ಸಿನೆಮಾಸ್ನಲ್ಲಿ ಸಿನಿಮಾ ತಂಡ ಅಭಿಮಾನಿಗಳನ್ನು ನೇರವಾಗಿ ಭೇಟಿಯಾಗಲಿದೆ.
ದುಬೈ ಪ್ರಯಾಣಕ್ಕೆ ನಟ ಶನೀಲ್ ಗೌತಮ್, ಜೆ.ಪಿ. ತುಮ್ಮಿನಾಡ್, ರಾಜ್ ಬಿ ಶೆಟ್ಟಿ, ಪ್ರಕಾಶ್ ತುಮ್ಮಿನಾಡ್, ದೀಪಕ್ ರೈ ಪಣಾಜೆ ಹಾಗೂ ಬಾಲ ನಟಿ ಪ್ರಕೃತಿ ಸೇರಿದ್ದಾರೆ. ತಂಡವು ವಿಮಾನ ನಿಲ್ದಾಣದಲ್ಲಿ ತೆಗೆಸಿಕೊಂಡಿರುವ ಫೋಟೋವನ್ನ ಶನೀಲ್ ಗೌತಮ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
‘ಸು ಫ್ರಮ್ ಸೋ’ ಈಗಾಗಲೇ ನೂರಾರು ಕೋಟಿ ಕಲೆಕ್ಷನ್ ಗಳಿಸಿದ್ದು, ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೂಲಿ ಮತ್ತು ವಾರ್-2ಂತಹ ದೊಡ್ಡ ಸಿನಿಮಾಗಳ ನಡುವೆ ಬಂದರೂ, ಈ ಚಿತ್ರ ತನ್ನದೇ ಆದ ಗುರುತನ್ನು ಮಾಡಿಕೊಂಡಿದೆ. ವಿದೇಶದಲ್ಲಿಯೂ ಇದೇ ರೀತಿ ಯಶಸ್ಸು ಕಾಣುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತರುತ್ತಿದೆ.
‘ಸು ಫ್ರಮ್ ಸೋ’ ತಂಡದ ದುಬೈ ಪ್ರವಾಸ ಕೇವಲ ಅಭಿಮಾನಿಗಳ ಮೀಟ್ಗೆ ಸೀಮಿತವಾಗಿರದೆ, ಕನ್ನಡ ಚಿತ್ರರಂಗದ ಪ್ರಭಾವವನ್ನು ಜಾಗತಿಕ ಮಟ್ಟದಲ್ಲಿ ತೋರಿಸುವ ಒಂದು ಸುವರ್ಣಾವಕಾಶವಾಗಿದೆ. ವಿದೇಶದಲ್ಲಿ ಕನ್ನಡ ಸಿನಿಮಾಗೆ ದೊರೆಯುತ್ತಿರುವ ಪ್ರತಿಕ್ರಿಯೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕನ್ನಡ ಚಿತ್ರಗಳಿಗೆ ದಾರಿ ತೆರೆಯಬಹುದೆಂಬ ನಂಬಿಕೆ ಹುಟ್ಟಿಸಿದೆ.
View this post on Instagram