ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಲಿವುಡ್ ಸ್ಟಾರ್ ನಟ ಸೂರ್ಯ ಅವರ ಮಾರುಕಟ್ಟೆ ಮೌಲ್ಯ ಪ್ರಸ್ತುತ ಸಿನಿರಂಗದಲ್ಲಿ ತಲ್ಲಣ ಸೃಷ್ಟಿಸಿದೆ. ಇತ್ತೀಚಿನ ವರ್ಷಗಳಲ್ಲಿ ಚಿತ್ರಗಳು ಸತತವಾಗಿ ಸೋತಾಗ ಹಾಗೂ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆದಾಗ ಸೂರ್ಯ ಅವರ ಬಿಸಿನೆಸ್ ಕೊಂಚ ಕುಸಿದಿತ್ತು. ಆದರೆ, ಇತ್ತೀಚೆಗೆ ತೆರೆಕಂಡ ‘ಕರುಪ್ಪು’ ಸಿನಿಮಾ ಅವರ ಸಿನಿ ಜರ್ನಿಗೆ ಭರ್ಜರಿ ಕಂಬ್ಯಾಕ್ ನೀಡಿದೆ. ಕೇವಲ ತಮಿಳುನಾಡಿನಲ್ಲಿಯೇ 170 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದೈತ್ಯ ಯಶಸ್ಸು ದಾಖಲಿಸಿದೆ.
100 ಕೋಟಿ ಕ್ಲಬ್ ಸೇರಿದ ಕಾಲಿವುಡ್ ಸಿಂಗಂ!
ಬಾಕ್ಸ್ ಆಫೀಸ್ ಗಳಿಕೆಯೇ ಸಿನಿಮಾ ರಂಗದಲ್ಲಿ ನಟನ ಯೋಗ್ಯತೆಯನ್ನು ನಿರ್ಧರಿಸುತ್ತದೆ. ‘ಕರುಪ್ಪು’ ಚಿತ್ರದ ಈ ಐತಿಹಾಸಿಕ ಯಶಸ್ಸು ಸೂರ್ಯ ಅವರ ಸಂಭಾವನೆಯನ್ನು ಶತಕೋಟಿ ಗಡಿಗೆ ತಲುಪಿಸಿದೆ. ಪ್ರಸ್ತುತ ಅವರು ಹೊರಗಿನ ಪ್ರೊಡಕ್ಷನ್ ಬ್ಯಾನರ್‌ಗಳ ಸಿನಿಮಾಗಳಿಗೆ ಬರೋಬ್ಬರಿ 100 ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎಂದು ಕಾಲಿವುಡ್ ಮೂಲಗಳು ವರದಿ ಮಾಡಿವೆ. ಈ ಮೂಲಕ ಈಗಾಗಲೇ ತಮಿಳು ಚಿತ್ರರಂಗದಲ್ಲಿ 100 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಿರುವ ರಜನಿಕಾಂತ್, ಕಮಲ್ ಹಾಸನ್, ಅಜಿತ್ ಕುಮಾರ್ ಹಾಗೂ ದಳಪತಿ ವಿಜಯ್ ಅವರಂತಹ ಘಟಾನುಘಟಿ ಸ್ಟಾರ್ ನಟರ ಎಲೈಟ್ ಲಿಸ್ಟ್‌ಗೆ ಸೂರ್ಯ ಹೆಮ್ಮೆಯಿಂದ ಸೇರ್ಪಡೆಯಾಗಿದ್ದಾರೆ.
ಅಭಿಮಾನಿಗಳಲ್ಲಿ ಹೆಚ್ಚಿದ ‘ವಿಶ್ವನಾಥ್ ಅಂಡ್ ಸನ್ಸ್’ ನಿರೀಕ್ಷೆ
ಸದ್ಯ ಯಶಸ್ಸಿನ ಉತ್ತುಂಗದಲ್ಲಿರುವ ಸೂರ್ಯ, ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ ‘ವಿಶ್ವನಾಥ್ ಅಂಡ್ ಸನ್ಸ್’ ಬಿಡುಗಡೆಗಾಗಿ ಸಜ್ಜಾಗುತ್ತಿದ್ದಾರೆ. ಖ್ಯಾತ ಕಮರ್ಷಿಯಲ್ ನಿರ್ದೇಶಕ ವೆಂಕಟ್ ಅಟ್ಲೂರಿ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾದ ಮೇಲೆ ಈಗ ಚಿತ್ರರಂಗ ಹಾಗೂ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿದೆ.



