ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಸೈಫ್ ಅಲಿ ಖಾನ್ ಅವರ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಟ್ರೋಲ್ ಆದ ಸಿನಿಮಾ ಎಂದರೆ ಅದು ‘ಆದಿಪುರುಷ್’. ರಾಮಾಯಣದ ಕಥೆ ಹೊಂದಿದ್ದ ಈ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ರಾವಣನ ಪಾತ್ರ ಮಾಡಿದ್ದರು. ಸಿನಿಮಾದ ಸಂಭಾಷಣೆ ಮತ್ತು ಗ್ರಾಫಿಕ್ಸ್ ಕಳಪೆ ಆಗಿದೆ ಎಂದು ಜನರು ಸಾಕಷ್ಟು ಟ್ರೋಲ್ ಮಾಡಿದ್ದರು. ಈಗ ಅದೇ ಸಿನಿಮಾವನ್ನು ಸೈಫ್ ಅಲಿ ಖಾನ್ ಮಗ ತೈಮೂರ್ ಅಲಿ ಖಾನ್ ಕೂಡ ನೋಡಿದ್ದು, ಆತನಿಗೂ ಈ ಸಿನಿಮಾ ಇಷ್ಟ ಆಗಿಲ್ಲ ಎಂದು ಸೈಫ್ ಅಲಿ ಖಾನ್ ಹೇಳಿದ್ದಾರೆ.
ಒಂದು ಸಂದರ್ಶನದಲ್ಲಿ ಮಾತನಾಡಿರುವ ಸೈಫ್ ಅಲಿ ಖಾನ್ ಕೆಲವು ಇಂಟರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.
‘ನೀವು ನಟಿಸಿದ ಯಾವುದಾದರೂ ಸಿನಿಮಾವನ್ನು ನಿಮ್ಮ ಮಕ್ಕಳು ನೋಡಿದ್ದಾರಾ’ ಎಂದು ಹೋಸ್ಟ್ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಸೈಫ್, ‘ಇತ್ತೀಚೆಗೆ ನಾನು ನನ್ನ ಮಗನಿಗೆ ಆದಿಪುರುಷ್ ಸಿನಿಮಾ ತೋರಿಸಿದೆ. ಆತನಿಗೆ ಚಿತ್ರದಲ್ಲಿ ನನ್ನ ಲುಕ್ ನೋಡಿ ಕೋಪ ಮಾಡಿಕೊಂಡಿದ್ದ, ಆಗ ನಾನು ಅವನಲ್ಲಿ ಕ್ಷಮೆ ಕೇಳಿದೆ’ ಎಂದು ಸೈಫ್ ಅಲಿ ಖಾನ್ ತಿಳಿಸಿದ್ದಾರೆ.
‘ಆದಿಪುರುಷ್’ ಸಿನಿಮಾದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು, ಕೃತಿ ಸನನ್ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸೈಫ್ ಅಲಿ ಖಾನ್ ಮಾಡಿದ ರಾವಣನ ಪಾತ್ರದ ಗೆಟಪ್ ಬಗ್ಗೆ ಅನೇಕರು ಟ್ರೋಲ್ ಮಾಡಿದ್ದರು. ಇದೇ ಕಾರಣದಿಂದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋಲು ಕಂಡಿತು.