ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ರಾಮಾಯಣ ಚಿತ್ರದ ಟೈಟಲ್ ಟೀಸರ್ ಇದೀಗ ದೇಶದ ಗಡಿ ದಾಟಿ ವಿದೇಶದಲ್ಲೂ ಸದ್ದು ಮಾಡುತ್ತಿದೆ. ಜುಲೈ 3ರಂದು ಬಿಡುಗಡೆಗೊಂಡ ಈ ಟೀಸರ್ಗೆ ದೇಶಾದ್ಯಂತ ಅಪಾರ ಸ್ಪಂದನೆ ಸಿಕ್ಕಿದ್ದು, ಇದೀಗ ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್ನಲ್ಲಿ ಟೀಸರ್ ಪ್ರದರ್ಶನಗೊಂಡಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಹೆಮ್ಮೆ ಮೂಡಿಸಿದೆ.
ಅಭಿವೃದ್ಧಿಶೀಲ ತಂತ್ರಜ್ಞಾನ ಮತ್ತು ಭವ್ಯ ದೃಶ್ಯಗಳ ಮೂಲಕ ತಯಾರಾಗಿರುವ ಈ ಟೈಟಲ್ ಟೀಸರ್ ಅನ್ನು ನ್ಯೂಯಾರ್ಕ್ನ ಹೃದಯ ಭಾಗವಾಗಿರುವ ಟೈಮ್ಸ್ ಸ್ಕ್ವೇರ್ನ ಬೃಹತ್ ಡಿಜಿಟಲ್ ಪರದೆಯ ಮೇಲೆ ಪ್ರದರ್ಶನ ಮಾಡಲಾಗಿದೆ. ಈ ಕ್ಷಣದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಲ್ಲಿನ ಜನರು ಕೂಡ ಟೀಸರ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಚಿತ್ರ ತಂಡವೇ ಅಧಿಕೃತವಾಗಿ ತಿಳಿಸಿದೆ.
ಟೈಟಲ್ ಟೀಸರ್ ಬಿಡುಗಡೆಯಾಗುತ್ತಿದ್ದಂತೆಯೇ ಭಾರತದಲ್ಲಿಯೂ ಅತ್ಯಂತ ಪ್ರಮುಖ 9 ನಗರಗಳಲ್ಲಿ ಈ ಟೀಸರ್ ಪ್ರದರ್ಶನಗೊಂಡಿತು. ಯಶ್ ಅಭಿಮಾನಿಗಳು ತೀವ್ರ ಉತ್ಸಾಹದೊಂದಿಗೆ ಈ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಟೀಸರ್ ನೋಡಿ ಸಖತ್ ರೆಸ್ಪಾನ್ಸ್ ನೀಡುತ್ತಿದ್ದಾರೆ. ಟೀಸರ್ನ ಐಮ್ಯಾಕ್ಸ್ 3D ಕನ್ಸೆಪ್ಟ್, ಹಾಲಿವುಡ್ ಮಟ್ಟದ ನಿರ್ಮಾಣ ಗುಣಮಟ್ಟ ಎಲ್ಲರ ಗಮನ ಸೆಳೆಯುತ್ತಿದೆ.
ಈ ಸಿನಿಮಾ ಬಾಲಿವುಡ್ನ ದಂಗಲ್ ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಹಾಗೂ ರಾವಣನ ಪಾತ್ರದಲ್ಲಿ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಎ.ಆರ್.ರೆಹಮಾನ್ ಹಾಗೂ ಹ್ಯಾನ್ಸ್ ಜಿಮ್ಮರ್ ಸಂಗೀತ ನೀಡಿದ್ದಾರೆ. ವಿಶ್ವದವರೆಗೆ ತಲುಪುವ ಗುರಿಯೊಂದಿಗೆ ಈ ಸಿನಿಮಾ ನಿರ್ಮಾಣವಾಗುತ್ತಿರುವುದು ಸ್ಪಷ್ಟವಾಗಿದೆ.