ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯ್ ದೇವರಕೊಂಡ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಕಿಂಗ್ಡಮ್’ ಈ ತಿಂಗಳ 31ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗ, ಜುಲೈ 26ರಂದು ತಿರುಪತಿಯಲ್ಲಿ ಚಿತ್ರ ತಂಡ ಟ್ರೈಲರ್ ಬಿಡುಗಡೆ ಮಾಡಿ ಭಕ್ತರ ಮತ್ತು ಅಭಿಮಾನಿಗಳ ನಡುವೆ ಸದ್ದು ಮಾಡಿದೆ.
ತಿರುಪತಿಯ ನೆಹರು ಮೈದಾನದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಯಾವುದೇ ಸೆಲೆಬ್ರಿಟಿಗಳಿಗಾಗಲಿ ಅಥವಾ ಅತಿಥಿಗಳಿಗೆ ಆಹ್ವಾನ ನೀಡಲಾಗಿಲ್ಲ. ಆದರೆ ಸಿನಿಮಾದ ನಾಯಕ ವಿಜಯ್ ದೇವರಕೊಂಡ, ನಾಯಕಿ ಭಾಗ್ಯಶ್ರೀ ಬೋರ್ಸೆ ಹಾಗೂ ನಿರ್ಮಾಪಕ ನಾಗ ವಂಶಿ ಮಾತ್ರವೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ವೇಳೆ ವಿಜಯ್ ದೇವರಕೊಂಡ ತಮ್ಮ ಮಾತನ್ನು ರಾಯಲಸೀಮೆ ಭಾಷೆಯಲ್ಲಿ ಪ್ರಾರಂಭಿಸಿ ಎಲ್ಲರ ಗಮನ ಸೆಳೆದರು. “ಈ ಬಾರಿ ವೆಂಕಟರಮಣ ಸ್ವಾಮಿ ನನ್ನ ಜೊತೆ ನಿಂತು ಬಿಟ್ಟರೆ, ನಂಬರ್ 1 ಸ್ಥಾನದಲ್ಲೇ ಹೋಗಿ ಕುಳಿತುಕೊಳ್ಳುತ್ತೇನೆ” ಎಂದು ಹೇಳಿದರು.
ಸಿನಿಮಾದ ಬಗ್ಗೆ ಮಾತನಾಡಿದ ಅವರು, ಈ ಬಾರಿ ಗೌತಮ್ ತಿನರೂರಿ ಅವರ ನಿರ್ದೇಶನ, ಅನಿರುದ್ಧ್ ಅವರ ಸಂಗೀತ, ನವೀನ್ ನೂಲಿ ಅವರ ಎಡಿಟಿಂಗ್, ನಾಗವಂಶಿ ಅವರ ನಿರ್ಮಾಣ ಎಲ್ಲವೂ ಕಣ್ತುಂಬಿಕೊಳ್ಳಲು ಉತ್ತಮವಾಗಿದೆ ಎಂದರು.
‘ಕಿಂಗ್ಡಮ್’ ಸಿನಿಮಾ ಸ್ಪೈ ಥ್ರಿಲ್ಲರ್ ಆಗಿದ್ದು, ವಿಭಿನ್ನ ಶೈಲಿಯಲ್ಲಿ ತೆರೆಕಾಣಲಿದೆ. ವಿಜಯ್ ದೇವರಕೊಂಡ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರ, ಅವರ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ. ಟ್ರೈಲರ್ ಹಾಗೂ ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.