ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ನಲ್ಲಿ ಮತ್ತೆ ಒಂದು ಭರ್ಜರಿ ಸ್ಪೈ ಆಕ್ಷನ್ ಸಿನಿಮಾ ಬಿಡುಗಡೆಯಾಗಲಿದೆ. ವಿಜಯ್ ದೇವರಕೊಂಡ ನಟನೆಯ ‘ಕಿಂಗ್‌ಡಮ್’ ಚಿತ್ರಕ್ಕಾಗಿ ಅಭಿಮಾನಿಗಳು ಬಹುಕಾಲದಿಂದ ನಿರೀಕ್ಷೆಯಲ್ಲಿ ಇದ್ದರು. ಇದೀಗ ಚಿತ್ರದ ನಿರ್ದೇಶಕ ಗೌತಮ್ ತಿನ್ನನುರಿ ಅವರ ಮಾರ್ಗದರ್ಶನದಲ್ಲಿ ಈ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರತಂಡ ಹೊಸ ಪ್ರೋಮೋ ಬಿಡುಗಡೆ ಮಾಡಿದ್ದೂ ಜೊತೆಗೆ, ಅಧಿಕೃತ ಬಿಡುಗಡೆಯ ದಿನಾಂಕವನ್ನೂ ಘೋಷಿಸಿದೆ.
ವಿಜಯ್ ದೇವರಕೊಂಡ ಮತ್ತು ಭಾಗ್ಯಶ್ರೀ ಬೋರ್ಸೆ ಅವರ ಈ ಬಹು ನಿರೀಕ್ಷಿತ ಚಿತ್ರವನ್ನು 2025ರ ಜುಲೈ 31ರಂದು ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಆದರೆ, ಹಿಂದಿ ಭಾಷೆಯಲ್ಲಿ ಈ ಚಿತ್ರದ ಥಿಯೇಟರ್ ರಿಲೀಸ್ ಬಗ್ಗೆ ಯಾವುದೇ ಮಾಹಿತಿ ನೀಡಲಾಗಿಲ್ಲ, ಇದು ಹಿಂದಿ ಪ್ರೇಕ್ಷಕರಿಗೆ ನಿರಾಶೆಯ ಸಂಗತಿಯಾಗಿ ಪರಿಣಮಿಸಿದೆ.
ಈ ಹಿಂದೆ ‘ಕಿಂಗ್‌ಡಮ್’ ಚಿತ್ರದ ಹಿಂದಿ ಟೀಸರ್ ಬಿಡುಗಡೆಯಾಗಿತ್ತು. ಆದರೆ ಇದೀಗ ತಯಾರಕರು ಹಿಂದಿ ಆವೃತ್ತಿಗೆ ಬಿಡುಗಡೆಯ ದಿನಾಂಕ ಘೋಷಿಸದೇ ನೇರವಾಗಿ OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯ ಯೋಚನೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ವರದಿಗಳ ಪ್ರಕಾರ, ನೆಟ್‌ಫ್ಲಿಕ್ಸ್ ಜೊತೆ ಈ ಕುರಿತು ಒಪ್ಪಂದವಿದೆ ಎಂದು ತಿಳಿದು ಬಂದಿದೆ.