ಹೊಸದಿಗಂತ ಡಿಜಿಟಲ್ ಡೆಸ್ಕ್:
ದಳಪತಿ ವಿಜಯ್ ನಟನೆಯ ಬಹು ನಿರೀಕ್ಷಿತ ‘ಜನ ನಾಯಗನ್’ ಸಿನಿಮಾ ಸದ್ಯಕ್ಕೆ ತೆರೆಗೆ ಬರುವ ಲಕ್ಷಣಗಳು ಕ್ಷೀಣವಾಗುತ್ತಿವೆ. ಜನವರಿ 9ರಂದು ಬಿಡುಗಡೆಗೊಳ್ಳಬೇಕಿದ್ದ ಈ ಚಿತ್ರಕ್ಕೆ ಇನ್ನೂ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿಲ್ಲ. ಸಿಬಿಎಫ್‌ಸಿ ಪ್ರಮಾಣ ಪತ್ರ ನೀಡಲು ವಿಳಂಬ ಮಾಡಿರುವ ಹಿನ್ನೆಲೆಯಲ್ಲಿ ನಿರ್ಮಾಪಕರು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು.
ಹೈಕೋರ್ಟ್ ಆರಂಭದಲ್ಲಿ ಚಿತ್ರಕ್ಕೆ ಪ್ರಮಾಣ ಪತ್ರ ನೀಡುವಂತೆ ಸೂಚನೆ ನೀಡಿದರೂ, ಕೆಲವೇ ಗಂಟೆಗಳೊಳಗೆ ತನ್ನದೇ ಆದೇಶಕ್ಕೆ ತಾತ್ಕಾಲಿಕ ತಡೆ ವಿಧಿಸಿತ್ತು. ಇದರಿಂದ ಅಸಮಾಧಾನಗೊಂಡ ಚಿತ್ರತಂಡ ಸುಪ್ರೀಂಕೋರ್ಟ್ ಮೆಟ್ಟಿಲೇರಿತು. ಆದರೆ ಅಲ್ಲಿ ಕೂಡ ನಿರೀಕ್ಷಿತ ಪರಿಹಾರ ದೊರಕಲಿಲ್ಲ. ಪ್ರಕರಣವನ್ನು ಮದ್ರಾಸ್ ಹೈಕೋರ್ಟ್‌ನಲ್ಲೇ ಇತ್ಯರ್ಥಪಡಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಸೂಚಿಸಿ, ತ್ವರಿತ ವಿಚಾರಣೆಗೆ ಆಸಕ್ತಿ ತೋರಿದಂತೆ ಕಾಣಲಿಲ್ಲ.
ಈ ಬೆಳವಣಿಗೆಯೊಂದಿಗೆ ‘ಜನ ನಾಯಗನ್’ ಪ್ರಕರಣ ಮತ್ತೆ ಹೈಕೋರ್ಟ್‌ಗೆ ವಾಪಸ್ಸಾಗಿದೆ. ಈ ಹಿಂದೆ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಜನವರಿ 23ಕ್ಕೆ ನಿಗದಿಪಡಿಸಿದ್ದರೂ, ಆ ದಿನವೇ ಅಂತಿಮ ತೀರ್ಪು ಬರುವ ಬಗ್ಗೆ ಅನುಮಾನಗಳಿವೆ. ಹೀಗಾಗಿ ಸಿನಿಮಾದ ಬಿಡುಗಡೆಯ ಭವಿಷ್ಯ ಇನ್ನೂ ಅಸ್ಪಷ್ಟವಾಗಿಯೇ ಉಳಿದಿದೆ.
ಇನ್ನು ಕೆಲವೇ ತಿಂಗಳಲ್ಲಿ ತಮಿಳುನಾಡಿನಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇರುವುದರಿಂದ, ಈ ವಿವಾದ ಇನ್ನಷ್ಟು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ಇದೆ. ಈ ಬಾರಿ ಚುನಾವಣಾ ಕಣಕ್ಕಿಳಿಯಲು ಸಜ್ಜಾಗಿರುವ ವಿಜಯ್ ಅವರ ಸಿನಿಮಾ ರಾಜಕೀಯ ಕಾರಣಗಳಿಂದಲೇ ತಡೆಗೀಡಾಗುತ್ತಿದೆ ಎಂಬ ಮಾತುಗಳು ಅಭಿಮಾನಿಗಳ ವಲಯದಲ್ಲಿ ಹರಿದಾಡುತ್ತಿವೆ. ಒಟ್ಟಿನಲ್ಲಿ ‘ಜನ ನಾಯಗನ್’ ಬಿಡುಗಡೆ ದಿನಾಂಕ ಮುಂದೂಡಲ್ಪಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.


