ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾರರ್ ಕಾಮಿಡಿ ಶೈಲಿಯಲ್ಲಿ ಮೂಡಿಬಂದ ‘ಸು ಫ್ರಮ್ ಸೋ’ ಚಿತ್ರವೊಂದು ಅಸಾಧಾರಣ ಯಶಸ್ಸು ಕಂಡು ಎಲ್ಲರನ್ನೂ ಅಚ್ಚರಿಗೊಳಿಸಿದೆ. ನಿರ್ದೇಶಕ ಜೆ.ಪಿ. ತುಮ್ಮಿನಾಡು ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಪ್ರೇಕ್ಷಕರ ಮನ ಗೆದ್ದಿದ್ದು, ಎಲ್ಲೆಡೆ ಹೌಸ್‌ಫುಲ್ ಶೋಗಳ ಮೂಲಕ ಅದ್ಭುತ ಪ್ರದರ್ಶನ ಕಾಣುತ್ತಿದೆ.
ಬಾಕ್ಸ್ ಆಫೀಸ್ ವರದಿ ಪ್ರಕಾರ, ‘ಸು ಫ್ರಮ್ ಸೋ’ ಚಿತ್ರವು ಮೊದಲ ದಿನವೇ 88 ಲಕ್ಷ ರೂಪಾಯಿ ಗಳಿಕೆ ಮಾಡಿತ್ತು. ಆದರೆ ಎರಡನೇ ದಿನ ಶನಿವಾರ ಕಲೆಕ್ಷನ್‌ನಲ್ಲಿ ಭಾರೀ ಜಂಪ್ ಕಂಡು, 2.44 ಕೋಟಿ ಬಾಚಿಕೊಂಡಿದೆ. ಇದೇ ಅಬ್ಬರ ಮುಂದುವರೆದರೆ, ಚಿತ್ರವು ಮೂರನೇ ದಿನವಾದ ಭಾನುವಾರ 4 ಕೋಟಿ ರೂ. ವರೆಗೆ ಗಳಿಸಬಹುದೆಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಪ್ರಸ್ತುತ ಒಟ್ಟು ಕಲೆಕ್ಷನ್ 3.32 ಕೋಟಿಗೆ ತಲುಪಿದೆ.
ಜನರ ಮಾತುಮಾತಿನಲ್ಲಿ ಸಿನಿಮಾ ಕುರಿತು ಹರಡಿರುವ ಪ್ರಚಾರದಿಂದ, ಮಲ್ಟಿಪ್ಲೆಕ್ಸ್‌ಗಳಲ್ಲಿ ಶೋಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಬೆಳಗ್ಗೆ 6.30ರಿಂದಲೇ ಶೋಗಳು ಆರಂಭವಾಗುತ್ತಿದ್ದು, ಇದರಿಂದ ವೀಕ್ಷಕರನ್ನು ಹೆಚ್ಚಾಗಿ ಆಕರ್ಷಿಸಲಾಗಿದೆ.
ಕರ್ನಾಟಕದಷ್ಟೇ ಅಲ್ಲದೆ, ನೆರೆಯ ರಾಜ್ಯಗಳಲ್ಲಿ ಕೂಡ ‘ಸು ಫ್ರಮ್ ಸೋ’ ಬಗ್ಗೆ ಚರ್ಚೆ ಜೋರಾಗಿದೆ. ಆಗಸ್ಟ್ 1ರಿಂದ ಮಲಯಾಳಂ ಭಾಷೆಯಲ್ಲಿಯೂ ಚಿತ್ರ ಬಿಡುಗಡೆಗೊಳ್ಳಲಿದ್ದು, ಖ್ಯಾತ ನಟ ದುಲ್ಕರ್ ಸಲ್ಮಾನ್ ಅವರೇ ವಿತರಕರಾಗಲಿದ್ದಾರೆ. ಈ ಚಿತ್ರ ತೆಲುಗಿನ ‘ಹರಿ ಹರ ವೀರ ಮಲ್ಲು’ಗೆ ಪೈಪೋಟಿ ನೀಡುವ ಮಟ್ಟಿಗೆ ಜನಪ್ರಿಯತೆ ಗಳಿಸಿದೆ.
ಒಟ್ಟಿನಲ್ಲಿ, ಮೊದಲ ವಾರಾಂತ್ಯದಲ್ಲೇ ಈ ಚಿತ್ರ 7 ರಿಂದ 8 ಕೋಟಿ ರೂ. ಗಳಿಸಬಹುದಾದ ಸಾಧ್ಯತೆಯಿದೆ. ‘ಸು ಫ್ರಮ್ ಸೋ’ ಸಿನಿಮಾ ನಿರೀಕ್ಷೆ ಮೀರಿ ಹಿಟ್ ಆಗಿ, ಹೊಸ ಕಲಾವಿದರಿಗೆ ದೊಡ್ಡ ವೇದಿಕೆಯಾಗುವ ಸಾಧ್ಯತೆಯನ್ನೂ ಕಟ್ಟಿಕೊಟ್ಟಿದೆ.